ಮೊದಲನೇ ವಾಚನ: ವಿಮೋಚನಾಕಾಂಡ 14:21-15:1
ಮೋಶೆ ಸಮುದ್ರದ ಮೇಲೆ ಕೈ ಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರ ನೀರನ್ನು ಒಂದು ಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು. ಇಸ್ರಯೇಲರು ಸಮುದ್ರ ಮಧ್ಯದಲ್ಲಿ ಒಣ ನೆಲದಲ್ಲೇ ನಡೆದು ಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು. ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿಗೊಳಿಸಿ, ಅವರ ರಥಗಳ ಚಕ್ರಗಳಲ್ಲಿ ತೊಡಕು ಉಂಟುಮಾಡಿದರು. ಇದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, "ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿ ಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ ನಮಗೆ ವಿರುದ್ದವಾಗಿ ಯುದ್ದ ಮಾಡುತ್ತಿದ್ದಾನೆ," ಎಂದುಕೊಂಡರು. ಅಷ್ಟರಲ್ಲಿ ಸರ್ವೇಶ್ವರ, " ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು" ಎಂದು ಮೋಶೆಗೆ ಹೇಳಿದರು. ಅಂತೆಯೇ ಮೋಶೆ ಸಮುದ್ರದ ಮೇಲೆ ಕೈ ಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿನಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗುತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿ ಬಿಟ್ಟರು. ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗೂ ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನೂ ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದು ಹೋದರು. ನೀರು ಅವರ ಎಡ ಬಲಗಳಲ್ಲಿ ಗೋಡೆಯಂತೆ ನಿಂತಿತ್ತು. ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರದ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆ ಇಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆಯನ್ನು ಹಾಡಿದರು: "ಮಾಡೋಣ ಸರ್ವೇಶ್ವರನ ಗುಣಗಾನ, ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶ ಮಾಡಿಹನು.
ವಿಮೋಚನಕಾಂಡ: 15: 8-9, 10, 12, 17
ಶ್ಲೋಕ: ಮಾಡೋಣ ಸರ್ವೇಶ್ವರನ ಗುಣಗಾನ
ಶುಭಸಂದೇಶ: ಮತ್ತಾಯ 12:46-50

ಮನಸಿಗೊಂದಿಷ್ಟು : ನಮ್ಮ ಅನುಭವಕ್ಕೆ ಬಂದಂತೆ ಎಷ್ಟೋ ಬಾರಿ ನಮ್ಮ ಒಡ ಹುಟ್ಟಿದವರು, ಸಂಬಂಧಿಗಳಿಗಿಂತ ಒಂದೇ ಮನಸ್ಥಿತಿಯ, ಒಂದೇ ಗುರಿಯ ಗೆಳೆಯರೊಂದಿಗೆ ಹೆಚ್ಚು ಬೆರೆಯುತ್ತೇವೆ. ಅದರಲ್ಲೂ ಒಂದು ಉದಾತ್ತವಾದ ಕಾರ್ಯ, ಕನಸಿನತ್ತ ಹೆಜ್ಜೆ ಹಾಕುವವರು ಅದೇ ಚಿಂತನೆಯ ವ್ಯಕ್ತಿಗಳೊಂದಿಗೆ ಹೆಚ್ಚು ಹತ್ತಿರವಾಗುತ್ತಾರೆ, ಬೆರೆಯುತ್ತಾರೆ. ಇಲ್ಲಿ ಯೇಸು ನಮಗೆ ಅದೇ ರೀತಿಯ ಕರೆಯನ್ನು ನೀಡುತ್ತಿದ್ದಾರೆ. ಅವರ ಮೌಲ್ಯ, ಆಶಯಗಳನ್ನು ಅಪ್ಪಿಕೊಳ್ಳುವವರನ್ನು ತಮ್ಮ ಆಪ್ತರನ್ನಾಗಿಸಿಕೊಳ್ಳುತ್ತಿದ್ದಾರೆ. ಅವರಿಗೆ ಹತ್ತಿರದವರಾಗೋಣ.
No comments:
Post a Comment