08.07.2019 - ಆಸ್ತಿಪಾಸ್ತಿಯಲ್ಲಿ ಹತ್ತರ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತು ಕೊಡುತ್ತೇನೆ.

ಮೊದಲನೇ ವಾಚನ: ಆದಿಕಾಂಡ 28:10-22


ಯಕೋಬನು ಖಾರನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. ಪ್ರಯಾಣ ಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ ಕಾರಣ ಆ ರಾತ್ತಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು. ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು: ಅದರ ತುದಿ ಆಕಾಶವನ್ನು ಮುಟ್ಟಿತ್ತು.  ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. ಇದಲ್ಲದೆ, ಸರ್ವೇಶ್ವರ ಸ್ವಾಮಿ ಅವನ ಬಳಿಯಲ್ಲೇ ನಿಂತು, "ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯವಾಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವವು. ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ.  ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ." ಎಂದರು. ಯಕೋಬನು ನಿದ್ರೆಯಿಂದ ಎಚ್ಚೆತ್ತನು. "ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆ ಹೋಯಿತು!" ಎಂದುಕೊಂಡನು; ಅಲ್ಲದೆ ಭಯಭಕ್ತಿಯಿಂದ,  "ಇದು ಮಹಾ ಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!" ಎಂದನು. ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು. 'ಲೂಜ್' ಎಂದು ಹೆಸರು ಪಡೆದಿದ್ದ ಆ ಊರಿಗೆ "ಬೇತೇಲ್" ಎಂದು ನಾಮಕರಣ ಮಾಡಿದನು. ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು: "ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು, ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು. ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತು ಕೊಡುತ್ತೇನೆ.

ಕೀರ್ತನೆ: 91:1-2, 3-4, 14-15

ಶ್ಲೋಕ: ನೀನೇ ನನ್ನ ರಕ್ಷಕನೂ, ನಾ ನಂಬಿದ ದೇವನು

ಶುಭಸಂದೇಶ: ಮತ್ತಾಯ  9:18-26

ಯೇಸುಸ್ವಾಮಿ ಬೋಧಿಸುತ್ತಿರುವಾಗ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ,  ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಾಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೆ, ಹೆದರಬೇಡ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ. ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ  ಕಳುಹಿಸಿ, ಯೇಸು ಕೊಠ್ಯಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು.  ಆಕೆ ಎದ್ದಳು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...