ಮೊದಲನೇ ವಾಚನ: ವಿಮೋಚನಾಕಾಂಡ , 22
ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ. ಅವನು ತನ್ನ ಜನರಿಗೆ, "ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟ ಸಾಧ್ಯ. ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನಗೈಯಬಹುದು. ಆದುದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು," ಎಂದು ಎಚ್ಚರಿಸಿದನು. ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ "ಪಿತೋಮ್" ಮತ್ತು "ರಾಮ್ಸೇಸ್" ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು. ಈಜಿಪ್ಟನರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚು ಹರಡಿಕೊಳ್ಳುತ್ತಿದ್ದರು. ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆ ಮಾಡಿಸಿಕೊಂಡರು. ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು. ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, "ಹಿಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು," ಎಂದು ಆಜ್ಞೆ ಮಾಡಿದನು.
ಕೀರ್ತನೆ: 124:1-3, 4-6, 7-8
ಶ್ಲೋಕ: ನಮಗುದ್ಧಾರ ಪ್ರಭುವಿನ ನಾಮದಲ್ಲಿ
ಶುಭಸಂದೇಶ: ಮತ್ತಾಯ: 10:34-11:1
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು. "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ ಛೇದಿಸುವ ಖಡ್ಗವನ್ನು ತರಲು ಬಂದೆನು. ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ಧ ಮಗಳಿಗೂ, ಅತ್ತೆಗೆ ವಿರುದ್ಧ ಸೊಸೆಗೂ ಭೇದ ಹುಟ್ಟಿಸಲು ಬಂದೆನು; ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು. ನನ್ನನ್ನು ಪ್ರೀತಿಸುವುದಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅಥವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನ ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ. ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳಿಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.
No comments:
Post a Comment