ಮೊದಲನೇ ವಾಚನ : ಯಾಜಕಕಾಂಡ 23:1, 4-11, 15-16, 27,
34-37
ಇಸ್ರಯೇಲರಿಗೆ ಈ ಪ್ರಕಾರ ಆಜ್ಞಾಪಿಸಬೇಕೆಂದು
ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು. "ಸರ್ವೇಶ್ವರನಿಂದ ನೇಮಕವಾದ ಹಬ್ಬದ ಕಾಲಗಳಲ್ಲಿ
ದೇವರ ಆರಾಧನೆಗಾಗಿ ಜನರು ಸಭೆಸೇರಬೇಕು. ಆ ಹಬ್ಬದ ದಿನಗಳನ್ನು ನಿಯಮಿತ ಕಾಲದಲ್ಲಿ ಪ್ರಕಟಿಸಬೇಕು:
ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ವೇಳೆಯಲ್ಲಿ ಸರ್ವೇಶ್ವರ ನೇಮಿಸಿದ
ಪಾಸ್ಕಹಬ್ಬವಾಗಬೇಕು. ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ
ಹಬ್ಬವನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಅಂದು ಮೊದಲ್ಗೊಂಡು ಏಳು ದಿನಗಳಲ್ಲೂ ಹುಳಿರಹಿತ
ರೊಟ್ಟಿಯನ್ನು ಊಟ ಮಾಡಬೇಕು. ಮೊದಲನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಆ ದಿನ ಯಾವ
ದುಡಿಮೆಯನ್ನು ಮಾಡಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನಿಗೆ ದಹನಬಲಿಯನ್ನು
ಸಮರ್ಪಿಸಬೇಕು. ಏಳನೆಯ ದಿನ ದೇವಾರಾಧನೆಗಾಗಿ ಸಭೆಸೇರಬೇಕು. ಅಂದು ಯಾವ ದುಡಿಮೆಯನ್ನೂ ಕೈಗೊಳ್ಳಬಾರದು,"
ಮೋಶೆಯ ಮುಖಾಂತರ
ಇಸ್ರಯೇಲರಿಗೆ ಸರ್ವೇಶ್ವರ ಹೀಗೆ
ಆಜ್ಞಾಪಿಸಿದರು: "ನಾನು ನಿಮಗೆ ಕೊಡುವ
ನಾಡನ್ನು ನೀವು ಸೇರಿದ ನಂತರ ಅಲ್ಲಿನ (ಜವೆಗೋದಿ) ಪೈರನ್ನು ಕೊಯ್ಯುವಾಗ ಪ್ರತಮ ಫಲದ ಸಿವುಡನ್ನು ಯಾಜಕನ
ಬಳಿಗೆ ತಂದೊಪ್ಪಿಸಬೇಕು. ನೀವು ಅಂಗೀಕೃತರಾಗುವಂತೆ ಯಾಜಕನು ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿ
ನೈವೇದ್ಯವಾಗಿ ಆರತಿ ಎತ್ತಬೇಕು. ಸಬ್ಬತ್ ದಿನದ ಮಾರನೆಯ ದಿನ ಮೊದಲ್ಗೊಂಡು,
ಅಂದರೆ ಆ ಪ್ರಥಮ ಸಿವುಡನ್ನು ನೈವೇದ್ಯವಾಗಿ ಆರತಿ
ಎತ್ತಿದ ದಿನ ಮೊದಲುಗೊಂಡು,
ಪೂರ್ಣವಾಗಿ ಏಳು ವಾರಗಳು
ಮುಗಿಯುವಂತೆ,
ಐವತ್ತು ದಿನಗಳನ್ನು
ಎಣಿಸಬೇಕು. ಏಳನೆಯ ಸಬ್ಬತ್ ದಿನದ ಮರುದಿನದಲ್ಲಿ ಸರ್ವೇಶ್ವರನಿಗೆ ಹೊಸಬೆಳೆಯ ನೈವೇದ್ಯವನ್ನು
ಸಮರ್ಪಿಸಬೇಕು. ಅದೇ ಏಳನೆಯ ತಿಂಗಳಿನ ಹತ್ತನೆಯ ದಿನವನ್ನು ಸರ್ವದೋಷಪರಿಹಾರ ದಿನವನ್ನಾಗಿ
ಆಚರಿಸಬೇಕು. ಅಂದು ದೇವಾರಾಧನೆಗಾಗಿ
ಸಭೆಕೂಡಬೇಕು. ಪೂರ್ಣವಾಗಿ ಉಪವಾಸ ಮಾಡಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ
ಬಲಿದಾನಮಾಡಬೇಕು. ಏಳನೆಯ ತಿಂಗಳಿನ ಹದಿನೈದನೆಯ
ದಿನ ಮೊದಲ್ಗೊಂಡು ಏಳು ದಿನಗಳವರೆಗೆ ಪರ್ಣಕುಟೀರಗಳ ಜಾತ್ರೆಯನ್ನು ಸರ್ವೇಶ್ವರನ ಗೌರವಾರ್ಥ ಆಚರಿಸಬೇಕು. ಮೊದಲನೆಯ ದಿನ ದೇವಾರಾಧನೆಗಾಗಿ
ಸಭೆ ಸೇರಬೇಕು;
ಯಾವ ದುಡಿಮೆಯನ್ನೂ
ಕೈಗೊಳ್ಳಬಾರದು. ಆ ಏಳು ದಿನಗಳಲ್ಲೂ ನೀವು ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ ಮಾಡಬೇಕು.
ಎಂಟನೆಯ ದಿನದಂದು ದೇವಾರಾಧನೆಗಾಗಿ ಸಭೆಸೇರಬೇಕು. ಸರ್ವೇಶ್ವರನ ಸನ್ನಿಧಿಯಲ್ಲಿ ದಹನ ಬಲಿದಾನ
ಮಾಡಬೇಕು. ಅದು ಸಭೆಸೇರುವ ದಿನವಾದುದರಿಂದ ಅಂದು ಎಲ್ಲ ದುಡಿಮೆಯನ್ನು ನಿಲ್ಲಿಸಬೇಕು. ಸರ್ವೇಶ್ವರ
ನೇಮಿಸಿರುವ ಸಬ್ಬತ್ ದಿನಗಳನ್ನು ಮತ್ತು ಮೇಲೆ ಹೇಳಿದ ಸ್ವಾಮಿಯ ಹಬ್ಬದ ದಿನಗಳನ್ನು ನೀವು
ಆಚರಿಸಬೇಕು. ಆ ದಿನಗಳಲ್ಲಿ ನೀವು ದೇವಾರಾಧನೆಗಾಗಿ ಸಭೆಸೇರುವಂತೆ ಜನರಿಗೆ ಪ್ರಕಟಿಸಬೇಕು.
ಸರ್ವೇಶ್ವರನಿಗೆ ಒಪ್ಪಿಸಬೇಕಾದ ಕಪ್ಪಕಾಣಿಕೆಗಳನ್ನೂ ಹರಕೆಗಳನ್ನೂ ಸಲ್ಲಿಸಬೇಕಲ್ಲದೆ,
ಮೇಲೆ ಸೂಚಿಸಿರುವ ಹಬ್ಬಗಳಲ್ಲಿ ಆಯಾ ದಿನಕ್ಕೆ
ನೇಮಿಸಿರುವ ಪ್ರಕಾರ ದಹನಬಲಿ,
ನೈವೇದ್ಯದ್ರವ್ಯ,
ಶಾಂತಿ ಸಮಾಧಾನದ ಬಲಿ,
ಪಾನದ್ರವ್ಯ ಇವುಗಳನ್ನು ತಂದು ಸರ್ವೇಶ್ವರನ ಸನ್ನಿಧಿ ಯಲ್ಲಿ
ಹೋಮ ಮಾಡಬೇಕು.
ಕೀರ್ತನೆ: 81:3-4,
5-6, 10-11
ಶ್ಲೋಕ: ಹಾಡಿರಿ ಶುಭಗೀತೆಯನ್ನು ಬಲಪ್ರಧನಾದ ದೇವನಿಗೆ
ಶುಭಸಂದೇಶ: ಮತ್ತಾಯ 13:54-58
ಯೇಸು ತಮ್ಮ
ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು
ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ,
"ಈ ಪರಿಜ್ಞಾನ ಇವನಿಗೆಲ್ಲಿಂದ
ಬಂತು? ಈ ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು
ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು, "ಪ್ರವಾದಿಗೆ
ಬೇರೆ ಎಲ್ಲಿಯಾದರೂ ಗೌರವ ದೊರಕೀತು;
ಮನಸಿಗೊಂದಿಷ್ಟು : ಅದೆಷ್ಟೋ ಬಾರಿ ನಮ್ಮ ನಡುವೆಯೇ ಇರುವ
ಶ್ರೇಷ್ಠತೆಯನ್ನು ನಾವು ಗುರುತಿಸಿಯೂ ಪುರಸ್ಕರಿಸುವುದಿಲ್ಲ. "ಶಂಖದಿಂದ ಬಂದರೆ ಮಾತ್ರ
ತೀರ್ಥ" ವೆಂಬಂತೆ ನಮ್ಮನ್ನು ಉದ್ಧರಿಸುವ ಸಂಗತಿಗಳು ಕಾಣದ, ದೂರದ ಮೂಲದಿಂದ ಬರಲಿ ಎಂದು
ಕಾಯುತ್ತೇವೆ, ಕಾತರಿಸುತ್ತೇವೆ. ಇದು ನಮ್ಮ ಬೆಳವಣಿಗೆಗೆ, ಆತ್ಮೋದ್ಧಾರಕ್ಕೆ ದೊಡ್ಡ ತೊಡಕು.
ತಮ್ಮ ಸ್ವಂತ ಜನರು ತಮ್ಮ ಮಾತು ಕೇಳಲಿಲ್ಲವೆಂಬ ಕೊರಗು ಯೇಸುವನ್ನು ಕಾಡುತಿತ್ತು. ಇಂದು ಅವರ
ಸ್ವಂತ ಜನರಿಗಿಂತ, ಬಂಧುಗಳಿಗಿಂತ ಹತ್ತಿರವಾಗಿರುವ ನಮ್ಮ ಬಗ್ಗೆಯೂ ಅದೇ ಕೊರಗು
ಯೇಸುವಿಗಿರಬಹುದು. ಅವರ ವಾಕ್ಯಗಳನ್ನು
ಪಾಲಿಸದೇ, ಗೌರವಿಸದೇ ಹೋದರೆ ಅವರ ಆ ಕೊರಗು ದೂರವಾಗುವುದಿಲ್ಲ. ನಮ್ಮೆಲ್ಲಾ ಕೊರಗು, ಹೊರೆಯನ್ನು
ದೂರ ಮಾಡುವ ನಮ್ಮ ಪ್ರಭುಕ್ರಿಸ್ತರನ್ನು ನಾವು ನಮ್ಮ ದಿನ ನಿತ್ಯದ ಜೀವನದ ಮೂಲಕ
ಪುರಸ್ಕರಿಸೋಣ.ಅವರ ಕೊರಗನ್ನು ದೂರವಾಗಿಸೋಣ.
No comments:
Post a Comment