ಮೊದಲನೇ ವಾಚನ: ಆದಿಕಾಂಡ 27:1-5, 15-29
ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, "ಮಗನೇ," ಎನ್ನಲು ಏಸಾವನು, "ಇಗೋ, ಇಲ್ಲೇ ಇದ್ದೇನೆ," ಎಂದನು. ಇಸಾಕನು ಅವನಿಗೆ, "ನೋಡು, ನಾನು ಮುದುಕನಾಗಿಬಿಟ್ಟೆ ಯಾವಾಗ ಸಾಯುತ್ತೇನೋ ಗೊತ್ತಿಲ್ಲ; ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆ ಮಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ; ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನು ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸ್ಸಾರೆ ಆಶೀರ್ವದಿಸುತ್ತೇನೆ," ಎಂದು ಹೇಳಿದನು. ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು. ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು. ತಾನು ಸಿದ್ಧ ಮಾಡಿದ ಸವಿಯೂಟವನ್ನು ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೋಟ್ಟಳು. ಯಕೋಬನು, ತಂದೆಯ ಬಳಿಗೆ ಹೋಗಿ, "ಅಪ್ಪಾ" ಎಂದು ಕರೆದನು. ತಂದೆಯು, "ಏನು ಮಗನೇ, ನೀನು ಯಾವ ಮಗನು?" ಎಂದು ಕೇಳಿದನು. ಯಕೋಬನು; "ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ," ಎಂದು ಹೇಳಿದನು. ಇಸಾಕನು, "ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?" ಎಂದು ಕೇಳಿದನು. ಯಕೋಬನು, "ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು." ಎಂದನು. ಆಗ ಇಸಾಕನು ಅವನಿಗೆ, "ಮಗನೇ, ಹತ್ತಿರಕ್ಕೆ ಬಾ ನೀನು ನನ್ನ ಮಗನೋ ಅಲ್ಲವೋ, ಎಂದು ಮುಟ್ಟಿ ತಿಳಿದುಕೊಳ್ಳಬೇಕು," ಎಂದನು. ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, "ಸ್ವರವೇನೋ ಯಕೋಬನ ಸ್ವರ; ಆದರೆ ಕೈ", ಏಸಾವನ ಕೈ", ಎಂದುಕೊಂಡನು. ಯಕೋಬನ ಕೈಗಳುಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು. ಆದರೂ ಮರಳಿ, "ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ" ಎಂದು ಕೇಳಿದನು. ಯಕೋಬನು "ಹೌದು," ಎಂದು ಉತ್ತರಕೊಟ್ಟನು. ಆಗ ಇಸಾಕನು, "ಊಟಮಾಡಲು ಆ ಬೇಟೆಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ," ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು. ಬಳಿಕ ಅವನ ತಂದೆ ಇಸಾಕನು, "ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು," ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿ ನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು -- "ನನ್ನ ಸುಕುಮಾರನಿಂದೇಳುವ ಸುವಾಸನೆ ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ ಸುವಾಸನೆಯಂತಿದೆ. ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು; ಅನುಗ್ರಹಿಸಲಿ ಹೇರಳ ದವಸಧಾನ್ಯವನು, ದ್ರಾಕ್ಷಾರಸವನ್ನು. ಸೇವೆಗೈಯಲಿ ನಿನಗೆ ಹೊರನಾಡುಗಳು, ಅಡ್ಡಬೀಳಲಿ ನಿನಗೆ ಹೊರಜನಾಂಗಗಳು. ಒಡೆಯನಾಗು ಸೋದರರಿಗೆ, ಅಡ್ಡಬೀಳಲಿ ತಾಯಕುಡಿ ನಿನಗೆ. ಶಾಪವಿರಲಿ ನಿನ್ನನ್ನು ಶಪಿಸುವವರಿಗೆ, ಆಶೀರ್ವಾದವು ನಿನ್ನನ್ನು ಹರಸುವವರಿಗೆ!"
ಕೀರ್ತನೆ: 135:1-2, 3-4, 5-6
ಶ್ಲೋಕ: ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ
ಶುಭಸಂದೇಶ: ಮತ್ತಾಯ 9:14-17
ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. "ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು; ಆಗ ಅವರು ಉಪವಾಸ ಮಾಡುವರು. "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿಹೋಗುತ್ತದೆ; ಬುದ್ದಲಿಗಳು ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ," ಎಂದರು.
No comments:
Post a Comment