ಮೊದಲನೇ ವಾಚನ: 2 ಕೊರಿಂಥಿಯರಿಗೆ 4:7-15
ಸಹೋದರರೇ, ನಾವು ಇಂಥ ಆಧ್ಯಾತ್ಮಿಕ ಮಾಣಿಕ್ಯವನ್ನು ಪಡೆದಿದ್ದರೂ ಮಣ್ಣಿನ ಮಡಕೆಗಳಂತೆ ಇದ್ದೇವೆ. ಹೀಗೆ, ಈ ಪರಮೋನ್ನತ ಶಕ್ತಿ ನಮಗೆ ಸೇರಿದ್ದಲ್ಲ, ದೇವರಿಗೆ ಸೇರಿದ್ದೆಂದು ವ್ಯಕ್ತವಾಗುತ್ತದೆ. ನಾವು ಇಕ್ಕಟ್ಟು ಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ. ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ. ಯೇಸುವಿನ ದಿವ್ಯ ಜೀವವು ನಮ್ಮ ದೇಹದಲ್ಲಿ ಗೋಚರವಾಗುವಂತೆ ಅವರ ಮರಣಯಾತನೆಯನ್ನು ನಿರಂತರವಾಗಿ ಅನುಭವಿಸುತ್ತಾ ಬಾಳುತ್ತಿದ್ದೇವೆ. ಯೇಸುವಿನ ಅಮರ ಜೀವವು ನಮ್ಮ ನಶ್ವರ ಶರೀರದಲ್ಲಿ ಗೋಚರವಾಗುವಂತೆ ಬದುಕಿರುವಾಗಲೇ ನಾವು ಯೇಸುವಿಗೋಸ್ಕರ ಸತತ ಸಾವಿಗೆ ಈಡಾಗಿದ್ದೇವೆ. ಹೀಗೆ ನಮ್ಮಲ್ಲಿ ಸಾವು ಕಾರ್ಯಗತವಾಗುತ್ತಿದ್ದರೆ ನಿಮ್ಮಲ್ಲಿ ಜೀವ ಕಾರ್ಯಗತವಾಗುತ್ತಿದೆ. "ನಾನು ವಿಶ್ವಾಸವಿಟ್ಟೆನು. ಆದ್ದರಿಂದ ಮಾತನಾಡಿದೆನು," ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ. ಇದೇ ಮನೋಭಾವನೆಯಿಂದ ಕೂಡಿರುವ ನಾವು ಮಾತನಾಡಲೇಬೇಕು. ಏಕೆಂದರೆ ನಮಗೆ ವಿಶ್ವಾಸವಿದೆ. ಪ್ರಭು ಯೇಸುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನು ಯೇಸುಕ್ರಿಸ್ತರೊಡನೆ ಪುನರುತ್ಥಾನಗೊಳಿಸಿ ತಮ್ಮ ಸಾನ್ನಿಧ್ಯಕ್ಕೆ ಬರಮಾಡಿಕೊಳ್ಳುವರು ಎಂಬುದನ್ನು ನಾವು ಬಲ್ಲೆವು. ಅಂತೆಯೇ ನಿಮ್ಮನ್ನೂ ಬರಮಾಡಿಕೊಳ್ಳುವರು. ಇದೆಲ್ಲವೂ ನಿಮ್ಮ ಒಳಿತಿಗಾಗಿಯೇ. ಹೀಗೆ ಅನೇಕರಲ್ಲಿ ದೇವರ ವರಪ್ರಸಾದವು ಉಕ್ಕಿ ಹರಿಯುವುದು; ಅವರಲ್ಲಿ ಕೃತಜ್ಞತಾ ಭಾವನೆಯನ್ನು ಹೆಚ್ಚಿಸುವುದು; ಇದರಿಂದಾಗಿ ದೇವರ ಮಹಿಮೆ ಬೆಳಗುವುದು.
ಕೀರ್ತನೆ: 126:1-2, 2-3, 4-5, 6
ಶ್ಲೋಕ: ಅಳುತಳುತಾ ಬಿತ್ತುವವರು ನಲಿನಲಿಯುತಾ ಕೊಯ್ಯುವರು
ಶುಭಸಂದೇಶ: ಮತ್ತಾಯ 20:20-28
ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. "ತಮ್ಮಿಂದ ನನಗೊಂದು ಉಪಕಾರ ಆಗಬೇಕು,"ಎಂದು ಸ್ವಾಮಿಯ ಪಾದಕ್ಕೆರಗಿದಳು. "ನಿನ್ನ ಕೋರಿಕೆ ಏನು?" ಎಂದರು ಯೇಸು. ಅದಕ್ಕೆ ಅವಳು, "ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು," ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?" ಎಂದು ಪ್ರಶ್ನಿಸಿದರು. "ಹೌದು, ಆಗುತ್ತದೆ," ಎಂದು ಅವರು ಮರುನುಡಿದರು. ಆಗ ಯೇಸು, "ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು," ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಟನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ," ಎಂದು ಹೇಳಿದರು.
ಮನಸಿಗೊಂದಿಷ್ಟು : ಮನುಷ್ಯರಲ್ಲಿ ಕಂಡು ಬರುವ ವಿವಿಧ ಭಾವನೆಗಳನ್ನು ಇಂದಿನ ಶುಭ ಸಂದೇಶದಲ್ಲಿ ಕಾಣಬಹುದು. ತನ್ನ ಮಕ್ಕಳ ಮೇಲಿನ ತಾಯಿಯ ಪ್ರೀತಿ, ಇತರ ಶಿಷ್ಯರ ಕೋಪ, ಯೇಸುವಿನ ಸಮಾಧಾನದ ಮಾತು ಇಲ್ಲಿದೆ. ವ್ಯಾಮೋಹ, ಕೋಪವೆಂಬ ಮನುಷ್ಯ ಸಹಜ ಭಾವಗಳ ನಡುವೆ ದೇವರ ಚಿತ್ತಕ್ಕೆ ಸಮರ್ಪಣೆ ಹಾಗೂ ವಿನೀತ ಭಾವದ ಗುಣದ ಬಗ್ಗೆ ಯೇಸು ಹೇಳುತ್ತಾರೆ. ನಮ್ಮೆಲ್ಲಾ ಭಾವಗಳ ನಡುವೆ ಕೊನೆಗೆ ಯೇಸುವಿನ ತ್ಯಾಗ ಹಾಗೂ ಸೇವಕನಾಗಿರಬೇಕೆಂಬ ಮಾತೇ ನಮ್ಮಲ್ಲಿ ಪ್ರತಿಧ್ವನಿಸುತ್ತಿರಬೇಕು.
No comments:
Post a Comment