ಮೊದಲನೇ ವಾಚನ: ಆದಿಕಾಂಡ 22:1-19

ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, "ಅಬ್ರಹಾಮನೇ, " ಎಂದು ಕರೆದರು. ಅವನು "ಇಗೋ, ಸಿದ್ದನಿದ್ದೇನೆ" ಎಂದನು. ಆಗ ದೇವರು, "ನಿನಗೆ ಒಬ್ಬನೇ ಒಬ್ಬನೂ ಮುದ್ದುಮಗನೂಆದ ಇಸಾಕನನ್ನು ಕರೆದುಕೊಂಡು ಮೊರೀಯ ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು" ಎಂದರು. ಅಬ್ರಾಮನು ಮುಂಜಾನೆಯೇ ಎದ್ದು ತನ್ನ ಹೆಸರುಗತ್ತೆಗೆ ತಡಿಹಾಕಿಸಿ ಹೋಮಬಲಿಗೆ ಬೇಕಾದ ಕಟ್ಟಿಗೆಯನ್ನು ಸಿಗಿದು ಸಿದ್ದಮಾಡಿಕೊಂಡು ಸೇವಕರಿಬ್ಬರನ್ನು ಹಾಗೂ ತನ್ನ ಮಗ ಇಸಾಕನನ್ನು ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಆ ಸ್ಥಳ ಕಾಣಿಸಿತು. ಅವನು ತನ್ನ ಸೇವಕರಿಗೆ, "ನೀವು ಇಲ್ಲೇ ಕತ್ತೆಯನ್ನು ನೋಡಿಕೊಂಡಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ಪುನಃ ಇಲ್ಲಿಗೆ ಬರುತ್ತೇವೆ," ಎಂದು ಹೇಳಿದನು. ಅಬ್ರಹಾಮನು ದಹನಬಲಿಗೆ ಬೇಕಾದ ಕಟ್ಟಿಗೆಯನ್ನು ತನ್ನ ಮಗ ಇಸಾಕನ ಮೇಲೆ ಹೊರಿಸಿದನು; ಬೆಂಕಿಯನ್ನು ಹಾಗೂ ಕತ್ತಿಯನ್ನು ತನ್ನ ಕೈಯಲ್ಲೇ ತೆಗೆದುಕೊಂಡನು. ಇಬ್ಬರೂ ಅಲ್ಲಿಂದ ಮುಂದಕ್ಕೆ ಹೊರಟರು. ಹೊಗುತ್ತಾ ಇದ್ದಾಗ ಇಸಾಕನು ತಂದೆ ಅಬ್ರಹಾಮನನ್ನು, "ಅಪ್ಪಾ" ಎಂದು ಕರೆದ; "ಏನು ಮಗನೇ?" ಎಂದ ಅಬ್ರಹಾಮ. ಇಸಾಕನು, "ಬೆಂಕಿ--ಕಟ್ಟಿಗೆಯೇನೋ ಇವೆ; ಆದರೆ ದಹನಬಲಿಗೆ ಬೇಕಾದ ಕುರಿಮರಿ ಎಲ್ಲಿ?" ಎಂದು ಕೇಳಿದ. ಅದಕ್ಕೆ ಅಬ್ರಹಾಮನು, "ಬಲಿಗೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುತ್ತಾರೆ, ಮಗನೇ," ಎಂದು ಉತ್ತರಕೊಟ್ಟ, ಅವರಿಬ್ಬರೂ ಹಾಗೇ ಮುಂದಕ್ಕೆ ಸಾಗಿದರು. ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿಂದ, "ಅಬ್ರಹಾಮನೇ, ಹೇ ಅಬ್ರಹಾಮನೇ" ಎಂದು ಕರೆದನು. ಅದಕ್ಕೆ ಅಬ್ರಹಾಮನು, "ಇಗೋ ಸಿದ್ಧನಿದ್ಧೇನೆ" ಎಃದ. ದೂತನು ಅವನಿಗೆ, "ಹುಡುಗನ ಮೇಲೆ ಕೈಯೊತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು," ಎಂದು ಹೇಳಿದನು. ಅಬ್ರಹಾಮನು ಕಣ್ಣೆತ್ತಿ ನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ. ಆ ಸ್ಥಳಕ್ಕೆ "ಯೆಹೋವ ಯೊರೆ ಎಂದು ಹೆಸರಿಟ್ಟ. "ಬೆಟ್ಟದ ಮೇಲೆ ಸರ್ವೇಶ್ವರಸ್ವಾಮಿಯೇ ಒದಗಿಸುತ್ತಾರೆ" ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, "ಸರ್ವೇಶ್ವರನ ವಾಕ್ಯವನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ; ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮೂದ್ರತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರುಶತ್ರುಗಳ ಪಟ್ಟಣಗಳನ್ನು ಸ್ವಾಧೀನ ಪಡಿಸಿಕೊಳ್ಳುವರು. ನೀನು ನನ್ನ ಮಾತುಗಳನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು. ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ," ಎಂದನು. ತರುವಾಯ ಅಬ್ರಹಾಮನುತನ್ನ ಸೇವಕರ ಬಳಿಗೆ ಮರಳಿ ಬಂದನು. ಅವರೆಲ್ಲರೂ ಜೊತೆಯಾಗಿ ಬೇರ್ಷೆಬಕ್ಕೆ ಹೋದರು. ಅಲ್ಲೇ ಅಬ್ರಹಾಮನು ವಾಸಮಾಡುತ್ತಿದ್ದನು.
ಕೀರ್ತನೆ: 115:1-2, 3-4, 5-6, 8-9
ಶ್ಲೋಕ: ನಡೆವೆನು ನಾನು ಪ್ರಭುವಿನ ಕಣ್ಮುಂದೆ
ಶುಭಸಂದೇಶ: ಮತ್ತಾಯ 9:1-8
ಯೇಸುಸ್ವಾಮಿ ದೋಣಿಯನ್ನು ಹತ್ತಿ ಮರಳಿ ಸರೋವರವನ್ನು ದಾಟಿ ತಮ್ಮ ಸ್ವಂತ ಊರಿಗೆ ಬಂದರು. ಆಗ ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾರ್ಶ್ವವಾಯು ರೋಗಿಗೆ, "ಮಗೂ, ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಆಗ ಅಲ್ಲಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, "ಇವನು ದೇವದೂಷಣೆ ಮಾಡುತ್ತಿದ್ದಾನೆ," ಎಂದುಕೊಂಡರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು, "ನೀವು ಮನಸ್ಸಿನಲ್ಲೇಕೆ ದುರಾಲೋಚನೆ ಮಾಡುತ್ತಿದ್ದೀರಿ? "ನಿನ್ನ ಪಾಪಗಳು ಕ್ಷಮಿಸಲಾಗಿದೆ" ಎನ್ನುವುದು ಸುಲಭವೂ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, "ಎದ್ದೇಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು" ಎಂದರು. ಅದರಂತೆಯೇ, ಆ ರೋಗಿ ಎದ್ದು ಮನೆಗೆ ಹೊರಟುಹೋದನು. ಇದನ್ನು ಕಂಡ ಜನರು ತಲ್ಲಣಗೊಂಡರು. ಮಾನವನಿಗೆ ಇಂಥ ಅಧಿಕಾರ ಕೊಟ್ಟ ದೇವರನ್ನು ಕೊಂಡಾಡಿದರು.
No comments:
Post a Comment