ಮೊದಲನೇ ವಾಚನ: ವಿಮೋಚನಾಕಾಂಡ: 16:1-5,9-15
ಇಸ್ರಯೇಲರ ಸಮಾಜ ಏಲೀಮಿನಿಂದ ಹೊರಟ ಮೇಲೆ, ಏಲೀಮಿಗೂ ಸಿನಾಯಿ ಬೆಟ್ಟಕ್ಕೂ ನಡುವೆಯಿರುವ 'ಸೀನ್' ಎಂಬ ಮರುಭೂಮಿಗೆ ಬಂದರು. ಈಜಿಪ್ಟನ್ನು ಬಿಟ್ಟು ಬಂದ ಎರಡನೆಯ ತಿಂಗಳಿನ ಹದಿನೈದನೆಯ ದಿನ ಅದು. ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು. ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದುತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟ ಮಾಡುತ್ತಿದ್ದೆವು." ಎಂದು ಗೊಣಗಿದರು. ಆಗ ಸರ್ವೇಶ್ವರ ಮೋಶೆಗೆ, "ಇಗೋ ನೋಡು, ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿ ದಿನವು ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ ನಡೆಯುವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ ತಿಳಿಯುತ್ತೇನೆ. ಆರನೆಯ ದಿನದಲ್ಲಿ ಮಾತ್ರ ಪ್ರತಿ ದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಕೂಡಿಸಿ ಸಿದ್ದಪಡಿಸಿಕೊಳ್ಳಬೇಕು," ಎಂದು ಹೇಳಿದರು. ಆರೋನನಿಗೆ ಮೋಶೆ, "ನೀನು ಇಸ್ರಯೇಲ್ ಸಮಾಜದ ಬಳಿಗೆ ಹೋಗಿ, ಅವರಿಗೆ, "ಸರ್ವೇಶ್ವರ ನಿಮ್ಮ ಗೊಣಗಾಟವನ್ನು ಕೇಳಿದ್ದಾರೆ. ಆದ್ದರಿಂದ ನೀವೆಲ್ಲರು ಅವರ ಸನ್ನಿಧಿಗೆ ಕೂಡಿ ಬರಬೇಕು, ಎಂದು ಆಜ್ಞಾಪಿಸು." ಎಂದು ಹೇಳಿದನು. ಅಂತೆಯೇ ಆರೋನನು ಇಸ್ರಯೇಲರ ಸಮಾಜಕ್ಕೆಲ್ಲ ಈ ಮಾತುಗಳನ್ನು ತಿಳಿಸುತ್ತಿರುವಾಗ ಆ ಜನರು ಮರುಭೂಮಿಯ ಕಡೆಗೆ ನೋಡಿದರು. ಆಗ ಇಗೋ, ಮೇಘದಲ್ಲಿ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು: ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು. "ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, " "ಸಂಜೆ ಮಾಂಸವನ್ನೂ ಬೆಳಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು" ಎಂದು ಹೇಳು," ಎಂದರು. ಸಂಜೆಯಾಗುತ್ತಲೆ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಗ್ಗೆ ಪಾಳೆಯದ ಸುತ್ತಲೂ ಮಂಜು ಬಿದ್ದಿತು. ಆ ಮಂಜು ಆರಿ ಹೋದ ನಂತರ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು. ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು "ಮನ್ನ" ಎಂದರು ಇದೇನಿರಬಹುದೆಂದು ವಿಚಾರಿಸಿದರು.
ಕೀರ್ತನೆ: 78:18-19, 23-24, 25-26, 27-28
ಶ್ಲೋಕ: ಅನುಗ್ರಹಿಸಿದನು ಪ್ರಭು, ಸ್ವರ್ಗದ ದವಸಧಾನ್ಯವನು
ಶುಭಸಂದೇಶ: ಮತ್ತಾಯ 13:1-9
ಅದೇ ದಿನ ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು. "ಒಬ್ಬ ರೈತ ಬಿತ್ತುವುದಕ್ಕೆ ಹೋದ ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದು ಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿ ಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು, ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು.
ಮನಸಿಗೊಂದಿಷ್ಟು : ಒಂದು ಒಳ್ಳೆಯ ಭೂಮಿ ಸ್ವಚ್ಛವಾಗಿಯೂ, ಮೆದುವಾಗಿಯೂ , ಫಲವತ್ತಾಗಿ ಇದ್ದಾಗ ಅದರಲ್ಲಿ ಬಿದ್ದ ಕಾಳು ಅಲ್ಲಿ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ಆಳವಾಗಿ ಬಿತ್ತಲಾಗಿರುವುದರಿಂದ ಅದಕ್ಕೆ ಹಕ್ಕಿಗಳ ಭಯವಿಲ್ಲ, ಬಿಸಿಲಿನ ತಾಪ ತಟ್ಟುವುದಿಲ್ಲ, ಮುಳ್ಳಿನ ಸಹವಾಸವಿಲ್ಲ. ಒಳ್ಳೆಯ ಫಲ ಅಲ್ಲಿ ಸಾಧ್ಯ. ನಮ್ಮ ಹೃದಯಗಳು ಆ ಫಲವತ್ತಾದ ಭೂಮಿಯಂತಾದಾಗ ಕೇಳುವ ಶುಭ ಸಂದೇಶ ಫಲ ನೀಡುತ್ತದೆ. ಅಂತೆಯೇ ಶುಭ ಸಂದೇಶವನ್ನು ಕೇಳುತ್ತಾ ಕೇಳುತ್ತಾ ಹೃದಯ ಮತ್ತಷ್ಟು ಫಲವತ್ತಾಗಿ ಹೋಗುತ್ತದೆ. ಕೇಳಿಸಿಕೊಳ್ಳುವಂಥ ಕಿವಿ, ಸ್ಪಂದಿಸಿ, ಫಲ ನೀಡುವಂತ ಹೃದಯ ನಮ್ಮದಾಗಲಿ.
ಮನಸಿಗೊಂದಿಷ್ಟು : ಒಂದು ಒಳ್ಳೆಯ ಭೂಮಿ ಸ್ವಚ್ಛವಾಗಿಯೂ, ಮೆದುವಾಗಿಯೂ , ಫಲವತ್ತಾಗಿ ಇದ್ದಾಗ ಅದರಲ್ಲಿ ಬಿದ್ದ ಕಾಳು ಅಲ್ಲಿ ತನ್ನ ಸಾರ್ಥಕತೆಯನ್ನು ಪಡೆಯುತ್ತದೆ. ಆಳವಾಗಿ ಬಿತ್ತಲಾಗಿರುವುದರಿಂದ ಅದಕ್ಕೆ ಹಕ್ಕಿಗಳ ಭಯವಿಲ್ಲ, ಬಿಸಿಲಿನ ತಾಪ ತಟ್ಟುವುದಿಲ್ಲ, ಮುಳ್ಳಿನ ಸಹವಾಸವಿಲ್ಲ. ಒಳ್ಳೆಯ ಫಲ ಅಲ್ಲಿ ಸಾಧ್ಯ. ನಮ್ಮ ಹೃದಯಗಳು ಆ ಫಲವತ್ತಾದ ಭೂಮಿಯಂತಾದಾಗ ಕೇಳುವ ಶುಭ ಸಂದೇಶ ಫಲ ನೀಡುತ್ತದೆ. ಅಂತೆಯೇ ಶುಭ ಸಂದೇಶವನ್ನು ಕೇಳುತ್ತಾ ಕೇಳುತ್ತಾ ಹೃದಯ ಮತ್ತಷ್ಟು ಫಲವತ್ತಾಗಿ ಹೋಗುತ್ತದೆ. ಕೇಳಿಸಿಕೊಳ್ಳುವಂಥ ಕಿವಿ, ಸ್ಪಂದಿಸಿ, ಫಲ ನೀಡುವಂತ ಹೃದಯ ನಮ್ಮದಾಗಲಿ.
No comments:
Post a Comment