ಮೊದಲನೇ ವಾಚನ: ವಿಮೋಚನಾಕಾಂಡ 2:1-15
ಲೇವಿಯ ವಂಶಸ್ಥನಾದ ಒಬ್ಬನು ಲೇವಿಯ ಕುಲದ ಕನ್ಯೆಯನ್ನು ಮದುವೆಯಾದನು.
ಆಕೆ ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆತ್ತಳು.
ಅದು ಅತಿ ಚೆಲುವಾದ ಕೂಸೆಂದು ತಿಳಿದು ಮೂರು ತಿಂಗಳು ಬಚ್ಚಿಟ್ಟಿದಳು.
ಆದರೆ ಹೆಚ್ಚು ಕಾಲ ಮರೆಮಾಡಲಾಗಲಿಲ್ಲ. ಎಂತಲೇ ಆಕೆ ಅಪಿನ ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು,
ಜೇಡಿಮಣ್ಣನ್ನೂ ರಾಳವನ್ನೂ ಅದಕ್ಕೆ ಮೆತ್ತಿ, ಮಗುವನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲಿದ್ದ ಜಂಬು ಹುಲ್ಲಿನ ನಡುವೆ ಇಟ್ಟಳು.
ಮಗುವಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಮಗುವಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತು ಕೊಂಡಳು. ಅಷ್ಟರಲ್ಲಿ ಫರೋಹನ ಪುತ್ರಿ ಸ್ನಾನಕ್ಕಾಗಿ ಆ ನದಿಯ ಬಳಿಗೆ ಬಂದಳು.
ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು.
ಆಕೆ ಜಂಬು ಹುಲ್ಲಿನ ನಡುವೆ ಪೆಟ್ಟಿಗೆಯೊಂದನ್ನು ಕಂಡಳು.
ದಾಸಿಯೊಬ್ಬಳನ್ನು ಕಳಿಸಿ ಅದನ್ನು ತರಿಸಿದಳು. ಪೆಟ್ಟಿಗೆಯನ್ನು ತೆರೆದು ನೋಡುವಾಗ ಏನಾಶ್ಚರ್ಯ!
ಅದರಲ್ಲಿ ಅಳುವ ಕೂಸು!
ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು.
"ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು," ಎಂದುಕೊಂಡಳು. ಆ ಮಗುವಿನ ಅಕ್ಕ ಬಂದು,
"ನಿಮ್ಮ ಪರವಾಗಿ ಈ ಕೂಸನ್ನು ಸಾಕಲು ಹಿಬ್ರಿಯ ಮಹಿಳೆಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೇ?" ಎಂದು ಫರೋಹನ ಪುತ್ರಿಯನ್ನು ವಿಚಾರಿಸಿದಳು.
"ಹೌದು, ಹಾಗೆಯೇ ಮಾಡು,"
ಎಂದಳು ಫರೋಹನ ಪುತ್ರಿ,
ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದು ತಂದಳು.
ಅವಳಿಗೆ ಆ ರಾಜಪುತ್ರಿ,
"ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನ್ನ ಪರವಾಗಿ ಸಾಕು ನಾನೇ ನಿನಗೆ ಸಂಬಳವನ್ನು ಕೊಡುತ್ತೇನೆ," ಎಂದಳು. ಅಂತೆಯೇ ಆ ಮಹಿಳೆ ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು.
ಆ ಹುಡುಗನು ಬೆಳೆದಾಗ ಅವನನ್ನು ಫರೋಹನ ಪುತ್ರಿಯ ಬಳಿಗೆ ಕರೆದುಕೊಂಡು ಬಂದಳು.
ಅವನು ಆಕೆಗೆ ಮಗನಾದನು.
"ನೀರಿನಿಂದ ನಾನು ಇವನನ್ನು ಎತ್ತಿದೆ" ಎಂದು ಹೇಳಿ ಅಕೆ ಅವನಿಗೆ
" ಮೋಶೆ ಎಂದು ಹೆಸರಿಟ್ಟಳು.
ಮೋಶೆ ದೊಡ್ಡವನಾದ ಮೇಲೆ ಸ್ವಜನರಾದ ಹಿಬ್ರಿಯರ ಬಳಿಗೆ ಹೋಗಿ ಅವರು ಮಾಡುತ್ತಿದ್ದ ಬಿಟ್ಟಿ ಕೆಲಸಗಳನ್ನು ನೋಡುತ್ತಿದ್ದನು. ಒಮ್ಮೆ ಒಬ್ಬ ಈಜಿಪ್ಟಿನವನು ತನ್ನ ದೇಶೀಯನಾದ ಹಿಬ್ರಿಯನನ್ನು ಹೊಡೆಯುವುದನ್ನು ಕಂಡನು.
ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಆ ಈಜಿಪ್ಟನನ್ನು ಹೊಡೆದು ಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಬಿಟ್ಟನು.
ಮಾರನೆಯ ದಿನ ಕೂಡ ಮೋಶೆ ಹೊರಗೆ ಹೋಗಿ ನೋಡಿದನು.
ಈ ಸಾರಿ ಇಬ್ಬರು ಹಿಬ್ರಿಯರೇ ಜಗಳವಾಡುತ್ತಿದ್ದರು ತಪ್ಪಿತಸ್ಥನಿಗೆ, "ಏನಯ್ಯಾ,
ಸ್ವಕುಲದವರನ್ನೇ ಹೊಡಿಯುತ್ತಿರುವೆ ಏಕೆ?" ಎಂದು ಕೇಳಿದನು.
ಅದಕ್ಕೆ ಅವನು, "ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿ ಹಾಗೂ ನ್ಯಾಯಾಧಿಪತಿಯನ್ನಾಗಿ ನೇಮಿಸಿರುವರು ಯಾರು?
ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನು ಕೊಂದು ಹಾಕಬೇಕೆಂದಿರುವೆಯಾ?" ಎಂದನು.
ಈ ಮಾತನ್ನು ಕೇಳಿದ್ದೇ ಮೋಶೆ, "ನಾನು ಮಾಡಿದ ಕಾರ್ಯ ಬಯಲಾಗಿಬಿಟ್ಟಿತಲ್ಲಾ!"
ಎಂದು ಅಂಜಿದನು. ನಡೆದ ಸಂಗತಿ ಫರೋಹನಿಗೆ ಮುಟ್ಟಿತು.
ಅವನು ಮೋಶೆಯನ್ನು ಕೊಲ್ಲಿಸಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆ ಫರೋಹನ ಬಳಿಯಿಂದ ಪಲಾಯನ ಗೈದು ಮಿದ್ಯಾನ್ ನಾಡನ್ನು ಸೇರಿದನು.
ಕೀರ್ತನೆ:
69:3, 14, 30-31, 33-34
ಶ್ಲೋಕ:
ಬಡ ಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.
ಶುಭಸಂದೇಶ:
ಮತ್ತಾಯ 11:20-24
ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಬುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮಖರಾಗಲಿಲ್ಲ. ಆದ್ದರಿಂದ ಆ ಪಟ್ಟಣಗಳನ್ನು ಯೇಸು ಖಂಡಿಸಿ: "ಕೋರಾಜ್ಜಿನ್
ಪಟ್ಟಣವೇ, ನಿನಗೆ ಧಿಕ್ಕಾರ!
ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಬುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ,
ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಬಳಿದುಕೊಂಡು, ಪಾಪಕ್ಕೆ ವಿಮುಖರಾಗುತ್ತಿದ್ದರು.
ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ.
ಎಲೈ ಕಫೆರ್ನವುಮ್ ಪಟ್ಟಣವೇ,.ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಬತ ಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ,
ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು. ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ."
ಎಂದರು.
No comments:
Post a Comment