ಮೊದಲನೇ ವಾಚನ: ವಿಮೋಚನಾಕಾಂಡ 3:13-20
ಮೋಶೆ ದೇವರಿಗೆ, "ನಾನು ಇಸ್ರಯೇಲರ ಬಳಿಗೆ ಹೋಗಿ, "ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ," ಎಂದು ಹೇಳಿದಾಗ ಅವರು ಒಂದು ವೇಳೆ, "ಆತನ ಹೆಸರೇನು?" ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?" ಎಂದು ಕೇಳಿದನು. ಆಗ ದೇವರು ಹೀಗೆಂದರು: "ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ "ತಾನಾಗಿ ಇರುವವನು, ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾನೆ" ಎಂದು ಹೇಳು." ದೇವರು ಮೋಶೆಗೆ ಮತ್ತೆ ಇಂತೆದರು: "ನೀನು ಇಸ್ರಯೇಲರಿಗೆ, ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ ಎಂದು ಹೇಳು. ಇದು ಸದಾ ಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೇ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು. ನೀನು ಹೋಗಿ ಇಸ್ರಯೇಲರ ಹಿರಿಯರನ್ನು ಕೂಡಿಸು. ಅವರಿಗೆ, ನಿಮ್ಮ ಪೂರ್ವಜರ ದೇವರು ಅಂದರೆ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರು ಆಗಿರುವ ಸರ್ವೇಶ್ವರ ನನಗೆ ದರ್ಶನಕೊಟ್ಟು ನಿಮ್ಮ ವಿಷಯದಲ್ಲಿ ಹೀಗೆಂದಿದ್ದಾರೆ: ನಿಮ್ಮನ್ನೂ ಈಜಿಪ್ಟ್ ದೇಶದಲ್ಲಿ ನಿಮಗೆ ಸಂಭವಿಸಿದ್ದೆಲ್ಲವನ್ನೂ ನಾನು ಕಣ್ಣಾರೆ ಕಂಡು ತಿಳಿದುಕೊಂಡಿದ್ದೇನೆ. ಈಜಿಪ್ಟಿನಲ್ಲಿ ನಿಮಗುಂಟಾಗಿರುವ ಕಷ್ಟಸಂಕಟಗಳಿಂದ ನಿಮ್ಮನ್ನು ಪಾರುಮಾಡಿ ಹಾಲೂ ಜೇನು ಹರಿಯುವ ನಾಡಿಗೆ, ಅಂದರೆ ಕಾನಾನ್ಯರು, ಹಿತ್ತಿಯರು, ಆಮೋರಿಯರು, ಪೆರಿಜೀಯರು, ಹಿವ್ವಿಯರು ಹಾಗು ಯೆಬೂಸಿಯರು ವಾಸವಾಗಿರುವ ನಾಡಿಗೆ ಬರಮಾಡಬೇಕೆಂದು ತೀರ್ಮಾನಿಸಿದ್ದೇನೆ" ಎಂದು ತಿಳಿಸು. ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನು ಮತ್ತು ಇಸ್ರಯೇಲಿನ ಹಿರಿಯರು ಈಜಿಪ್ಟ್ ದೇಶದ ಅರಸನ ಬಳಿಗೆ ಹೋಗಿ ಅವನಿಗೆ, "ಹಿಬ್ರಿಯರ ದೇವರಾಗಿರುವ ಸರ್ವೇಶ್ವರ ನಮಗೆ ಪ್ರತ್ಯಕ್ಷರಾದರು ಆದುದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯೊಪ್ಪಿಸಬೇಕಾಗಿದೆ. ಅಪ್ಪಣೆಯಾಗಬೇಕು" ಎಂದು ಕೇಳಿಕೊಳ್ಳಿ ಆ ಈಜಿಪ್ಟಿನ ಅರಸನು ಎಷ್ಟು ಬಲಾತ್ಕಾರ ಮಾಡಿದರೂ ನಿಮ್ಮನ್ನು ಬಿಡುವುದಿಲ್ಲವೆಂದು ತಿಳಿದಿದ್ದೇನೆ. ಆದಕಾರಣ ನನ್ನ ಭುಜಬಲವನ್ನು ಪ್ರದರ್ಶಿಸುವೆನು. ಅಲ್ಲಿ ಮಹಾತ್ಕಾರ್ಯಗಳನ್ನು ಮಾಡಿ, ಈಜಿಪ್ಟ್ ದೇಶವನ್ನೇ ನಾನಾ ವಿಧವಾಗಿ ಬಾಧಿಸುವೆನು. ಆಮೇಲೆ ಅರಸನು ನಿಮ್ಮನ್ನು ಬಿಡುಗಡೆ ಮಾಡುವನು.
ಕೀರ್ತನೆ: 105:1, 5, 8-9, 24-25 26-27
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು
ಶುಭಸಂದೇಶ: ಮತ್ತಾಯ 11: 28-30
ಆ ಸಮಯದಲ್ಲಿ ಯೇಸುಸ್ವಾಮಿ, ಜನಸಮೂಹವನ್ನುದ್ದೇಶಿಸಿ: "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ: ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು: ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.
Praise the Lord.
ReplyDeleteGod is great praise the Lord
ReplyDeletePraise the lord
ReplyDeletePraise the lord jesus
ReplyDelete