ಸಾಧಾರಣ ಕಾಲದ 26ನೇ ಮಂಗಳವಾರ
ಮೊದಲನೇ ವಾಚನ: ಯೋಬ: 3:1-3, 11-17, 20-23 - (ವಿಮೋಚನಕಾಂಡ: 23:20-23)
ಕೊನೆಗೆ ಯೋಬನೇ ಬಾಯ್ದೆರೆದು ತನ್ನ ಹುಟ್ಟು ದಿನವನ್ನು ಹೀಗೆಂದು ಶಪಿಸಿದ: "ಹಾಳಾಗಿ ಹೋಗಲಿ ನಾ ಹುಟ್ಟಿದ ದಿನವು "ಗಂಡು ಮಗುವನ್ನು ಗರ್ಭ ಧರಿಸಿದೆ" ಎಂದಾ ಇರುಳು! ಹುಟ್ಟುವಾಗಲೇ ನಾನೇಕೆ ಸಾಯಲಿಲ್ಲ? ಉದರದಿಂದ ಬಂದೊಡನೆ ನಾನೇಕೆ ಮಡಿಯಲಿಲ್ಲ? ತಾಯಿಯ ಮಡಿಲು ನನ್ನನು ಹೊತ್ತುದೇಕೆ? ಆ ತಾಯ್ಮೊಲೆಗಳು ನನಗೆ ಕುಡಿಯ ಕೊಟ್ಟುದೇಕೆ? ಆಗ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ. ಕಣ್ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆ. ಪಾಳು ಪೊಡವಿಯಲ್ಲಿ ನೆಲಮಾಳಿಗೆಯನ್ನು ನಿರ್ಮಿಸಿಕೊಂಡಿದ್ದ ರಾಜ-ಮಂತ್ರಿಗಳೊಡನೆ ನಾನಿರುತ್ತಿದ್ದೆ. ಮನೆಗಳಲ್ಲಿ ತಮಗಾಗಿ ಬೆಳ್ಳಿ ಬಂಗಾರಗಳನ್ನು ತುಂಬಿಸಿಕೊಂಡಿದ್ದ ಅಧಿಪತಿಗಳೊಡನೆ ನಾನು ಶ್ರಮಿಸುತ್ತಿದ್ದೆ. ಗರ್ಭಸ್ರಾವವಾಗಿ ಬಿದ್ದು ಹೂಳಿಟ್ಟ ಪಿಂಡದಂತೆ ಬೆಳಕನ್ನೇ ಕಾಣದೇ ಸತ್ತುಹೋದ ಕೂಸುಗಳಂತೆ ಪ್ರಾಯಶಃ ಜನ್ಮವೇ ಇಲ್ಲದವನಾಗಿ ನಾನಿರುತ್ತಿದ್ದೆ. ದಣಿದವರಿಗೆ ದೊರಕುವುದು ಆ ಕೂಪದಲಿ ವಿಶ್ರಾಂತಿ, ಅಣಗುವುದಲ್ಲಿ ದುರುಳರು ಕೊಡುವ ಹಾವಳಿ. ಕಷ್ಟದಲ್ಲಿರುವವನಿಗೆ ಏತಕ್ಕೆ ಬೆಳಕು? ದುಃಖ ಪೀಡಿತನಿಗೆ ಏತಕ್ಕೆ ಬದುಕು? ಎಷ್ಟು ಅಗೆದರೂ ದೊರಕದು ಅಂಥವರಿಗೆ ನಿಧಿ ನಿಕ್ಷೇಪ ಅದಕಿಂತ ಮಿಗಿಲಾಗಿ ಬಯಸಿದರೂ ಬಾರದು ಮರಣ. ಅವರು ಸಮಾಧಿಗೆ ಸೇರುವಾಗ ಆಗುವುದು ಅವರಿಗೆ ಅಮಿತಾನಂದ. ಬೆಳಕು ಏತಕೆ ದಾರಿ ಮುಚ್ಚಿರುವವನಿಗೆ? ತನ್ನ ಸುತ್ತಲೂ ದೇವರೆ ಬೇಲಿ ಹಾಕಿರುವವನಿಗೆ?"
ಕೀರ್ತನೆ: 88:2-3, 4-5, 6, 7-8
ಶ್ಲೋಕ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ.
ಶುಭಸಂದೇಶ: ಲೂಕ 9:51-56 (ಮತ್ತಾಯ 18:1-5, 10)
ತಾವು ಸ್ವರ್ಗಾರೋಹಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, "ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶ ಮಾಡಲಿ ಎಂದು ನೀವು ಆಜ್ಞೆ ಮಾಡಬಹುದಲ್ಲವೆ?" ಎಂದರು. ಯೇಸು ಅವರ ಕಡೇ ತಿರುಗಿ "ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ" ಎಂದು ಅವರನ್ನು ಖಂಡಿಸಿದರು. ಆನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.
ಚಿಂತನೆ : ಮನ್ನಣೆಯ ಆಸೆ ಎಂಬುದು ಸ್ವತಃ: ಮನುಷ್ಯನಷ್ಟೇ ಪುರಾತನ. ಜೆರುಸಲೇಮಿನ ಮಾರ್ಗದಲ್ಲಿ ತಿರಸ್ಕಾರಕ್ಕೆ ಒಳಗಾದಾಗ ಸಹಜವೆಂಬಂತೆ 'ಸಿಡಿಲಮರಿ'ಗಳಾದ ಯಕೋಬ ಯೋವಾನ್ನರು ಕೋಪಗೊಳ್ಳುತ್ತಾರೆ. ಕ್ರಿಸ್ತನದು ಮಾತ್ರ ಎಂದಿನ ಸಂಯಮ. ಇದು ಒಂದು ರೀತಿಯಲ್ಲಿ ಮುಂದಿನ ದಿನಗಳಿಗಾಗಿ ಸಿದ್ಧತೆಯೂ ಹೌದು. ಇದಕ್ಕಿಂತ ಘೋರ ತಿರಸ್ಕಾರ ಜೆರುಸಲೇಮಿನಲ್ಲಿ ಕಂಡರು ಯೇಸು. ಯೇಸುವಿನ ಸ್ವರ್ಗಾರೋಹಣ ನಂತರ ಇದೇ ಶಿಷ್ಯರು ಅನುಭವಿಸಿದ್ದೂ ತಿರಸ್ಕಾರವೇ. ಆದರೆ ಇಂದಿನ ಘಟನೆಯಲ್ಲಿ ಅರಿತ ಪಾಠ ಮುಂದೆ ಅವರಿಗೆ ಉಪಯೋಗಕ್ಕೆ ಬಂದಿರಬಹುದು. ಮಾನವನ ತಿರಸ್ಕಾರಕ್ಕೆ ಕುಗ್ಗದೆ ದೇವರ ಅಪ್ಪುಗೆಗಾಗಿ ಹಂಬಲಿಸೋಣ
No comments:
Post a Comment