ಸಾಧಾರಣ ಕಾಲದ ೨೯ನೇ - ಮಂಗಳವಾರ
ಮೊದಲನೆಯ ವಾಚನ ಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ2:12-22
“ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ.ಯೇಸುಕ್ರಿಸ್ತರೇ ನಮ್ಮ ಶಾಂತಿದಾತ.”
ಸಹೋದರರೇ, ಹಿಂದೊಮ್ಮೆ ನೀವು ಯೇಸುಕ್ರಿಸ್ತರಿಂದ ದೂರವಿದ್ದಿರಿ; ದೇವರು ಆಯ್ದುಕೊಂಡ ಜನಾಂಗಕ್ಕೆ ಸೇರದೆ ಪರಕೀಯರಾಗಿದ್ದಿರಿ; ದೇವರು ತಮ್ಮ ಜನರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಪಾಲಿಲ್ಲದವರಾಗಿದ್ದಿರಿ; ನಂಬಿಕೆ ನಿರೀಕ್ಷೆ ಇಲ್ಲದೆ ಬಾಳಿದಿರಿ. ಹೀಗೆ ಹಿಂದೊಮ್ಮೆ ದೇವರಿಂದ ದೂರವಾಗಿದ್ದ ನಿಮ್ಮನ್ನು ಕ್ರಿಸ್ತ ಯೇಸು ಸುರಿಸಿದ ರಕ್ತದ ಮೂಲಕ ದೇವರ ಹತ್ತಿರಕ್ಕೆ ತರಲಾಯಿತು. ಯೇಸುಕ್ರಿಸ್ತರೇ ನಮ್ಮ ಶಾಂತಿದಾತ. ನಿಮ್ಮನ್ನೂ ನಮ್ಮನ್ನೂ ಒಂದುಗೂಡಿಸಿದವರು ಅವರೇ. ನಮ್ಮೀರ್ವರನ್ನು ಪ್ರತ್ಯೇಕಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತಮ್ಮ ಶರೀರದಿಂದಲೇ ಕೆಡವಿಹಾಕಿದ್ದಾರೆ. ವಿಧಿನಿಯಮಗಳಿಂದ ಕೂಡಿದ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿದ್ದಾರೆ. ಉಭಯರನ್ನು ಒಂದುಗೂಡಿಸಿ, ಶಾಂತಿ ಸಮಾಧಾನವನ್ನೇರ್ಪಡಿಸಿ, ನೂತನ ಮಾನವನನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ಶಿಲುಬೆಯ ಮರಣದ ಮೂಲಕ ಹಗೆತನವನ್ನು ನಿರ್ಮೂಲಗೊಳಿಸಿ ಉಭಯತ್ರರನ್ನು ಒಂದೇ ದೇಹದಂತೆ ಮಾಡಿ ದೇವರೊಂದಿಗೆ ಸಂಧಾನಗೊಳಿಸಿದ್ದಾರೆ. ಯೇಸುಕ್ರಿಸ್ತರು ಬಂದು ದೇವರಿಂದ ದೂರವಾಗಿದ್ದ ನಿಮಗೂ ಹತ್ತಿರವಾಗಿದ್ದ ನಮಗೂ ಶಾಂತಿಯ ಸಂದೇಶವನ್ನು ಸಾರಿದರು. ಇದರ ಪರಿಣಾಮವಾಗಿ ಅವರ ಮುಖಾಂತರವೇ ಉಭಯತ್ರರು ಒಂದೇ ಪವಿತ್ರಾತ್ಮ ಅವರಲ್ಲಿ ಪಿತನ ಸಾನಿಧ್ಯವನ್ನು ಸೇರಲು ಮಾರ್ಗವಾಯಿತು. ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವಜನರೊಂದಿಗೆ ಸಹಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸುಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವಮಂದಿರ ಆಗುತ್ತದೆ. ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.
ದೇವರ ವಾಕ್ಯವಿದು.
ಕೀರ್ತನೆ 85:8-13. ಗಿ. 8.
ಶ್ಲೋಕ : ತೋರಿಸೆಮಗೆ ಪ್ರಭೂ, ಕರುಣೆಯನು.
|ಘೋಷಣೆ: ಯೊವಾನ್ನ 6:63, 68
ಅಲ್ಲೆಲೂಯ, ಅಲ್ಲೆಲೂಯ !
ನಾನು ನಿಮ್ಮೊಡನೆ ಆಡಿದ ಮಾತುಗಳುಜೀವದಾಯಕ ದೇವರಾತ್ಮವನ್ನು ತರುತ್ತವೆ.
ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
ಅಲ್ಲೆಲೂಯ !
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:35-38
“ಯಜಮಾನನು ಬಂದು ಯಾವ ಯಾವ ಸೇವಕಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ ಅಂಥವರು ಭಾಗ್ಯವಂತರು.”
ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು : “ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವಕರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡುಕಟ್ಟಿನಿಂತ, ಅವರನ್ನುಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಯಜಮಾನನು ಬರುವಾಗ ನಡುರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು.”
ಪ್ರಭು ಕ್ರಿಸ್ತರ ಸಂದೇಶವಿದು.
No comments:
Post a Comment