ಸಾಧಾರಣ ಕಾಲದ 29ನೇ - ಶುಕ್ರವಾರ
ಮೊದಲನೆಯ ವಾಚನಸಂತ ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ4:1-6
“ನಮ್ಮೆಲ್ಲರಿಗೂ ಪ್ರಭು ಒಬ್ಬರೇ, ವಿಶ್ವಾಸವೂ ಒಂದೇ;ದೀಕ್ಷಾಸ್ನಾನವೂ ಒಂದೇ.”
ಸಹೋದರರೇ, ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ ದೇವರ ಕರೆಗೆ ಅನುಗುಣವಾಗಿಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು; ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ.ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂಅವರೇ.
ದೇವರ ವಾಕ್ಯವಿದು.
ಕೀರ್ತನೆ 24:1-6. ಗಿ. 6
ಶ್ಲೋಕ : ಇಂಥವರೇ ದೇವರ ದರ್ಶನಾಭ್ಯರ್ಥಿಗಳು.
ಘೋಷಣೆ ಯೊವಾನ್ನ 14:6
ಅಲ್ಲೆಲೂಯ, ಅಲ್ಲೆಲೂಯ !
ಮಾರ್ಗವೂ ಸತ್ಯವೂ ಜೀವವೂ ನಾನೇ;
ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.
ಅಲ್ಲೆಲೂಯ !
ಶುಭಸಂದೇಶಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:54-59
“ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿಅರಿತುಕೊಳ್ಳಬಲ್ಲಿರಿ;ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ?”
ಯೇಸುಸ್ವಾಮಿ ಜನಸಮೂಹವನ್ನು ನೋಡಿ, “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ಭಾರಿ ಮಳೆ ಬರುತ್ತದೆ ಎನ್ನುತ್ತೀರಿ; ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಢಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ;ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನವಿರೋಧಿಯೊಡನೆ ವ್ಯಾಜ್ಯತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯಾಧಿಕಾರಿ ಕೈಗೊಪ್ಪಿಸಬಹುದು. ಸೆರೆಯಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ,” ಎಂದರು.
ಪ್ರಭು ಕ್ರಿಸ್ತರ ಶುಭಸಂದೇಶವಿದು.
ಪ್ರಭು ಕ್ರಿಸ್ತರ ಶುಭಸಂದೇಶವಿದು.
No comments:
Post a Comment