ಸಾಧಾರಣ ಕಾಲದ 28ನೇ - ಬುಧವಾರ
ಮೊದಲನೇ ವಾಚನ: ಗಲಾತ್ಯರಿಗೆ: 5: 18-25
ನೀವು ಪವಿತ್ರಾತ್ಮ ನಡೆಸುವ ಮಾರ್ಗದಲ್ಲಿ ನಡೆಯುವವರಾದರೆ, ಧರ್ಮಶಾಸ್ತ್ರದ ವಿಧಿನಿಯಮಗಳಿಗೆ ನೀವು ಅಧೀನರಲ್ಲ. ದೈಹಿಕ ವ್ಯಾಮೋಹದ ದುಷ್ಪರಿಣಾಮಗಳು ತಿಳಿದೇ ಇವೆ: ಹಾದರ, ಅಶುದ್ದತೆ, ಕಾಮುಕತನ, ವಿಗ್ರಹಾರಾಧನೆ, ಮಾಟಮಂತ್ರ, ಹಗೆತನ, ಜಗಳ, ಹೊಟ್ಟೆಕೆಚ್ಚು, ಕ್ರೋಧ, ಸ್ವಾರ್ಥಭೇದ, ಪಕ್ಷಪಾತ, ಮತ್ಸರ, ಕುಡುಕತನ, ದುಂದೌತಣ - ಇತ್ಯಾದಿಗಳು. ಇಂಥ ಕೃತ್ಯಗಳನ್ನು ಮಾಡುವವರು ದೇವರ ಸಾಮ್ರಾಜ್ಯಕ್ಕೆ ಬಾಧ್ಯಾರಲ್ಲ ಎಂದು ಈಗಾಗಲೇ ನಿಮ್ಮನ್ನು ಎಚ್ಚರಿಸಿದ್ದೇನೆ; ಈಗಲೂ ಎಚ್ಚರಿಸುತ್ತೇನೆ. ಪವಿತ್ರಾತ್ಮದತ್ತವಾದ ಸತ್ಫಲಗಳು ಯಾವುದೆಂದರೆ: ಪ್ರೀತಿ, ಆನಂದ, ಶಾಂತಿಸಮಧಾನ, ಸಹನೆ, ದಯೆ, ಸದ್ಗುಣ, ಪಾಮಾಣಿಕತೆ, ಸೌಜನ್ಯ, ಸಂಯಮ - ಇಂಥವುಗಳೇ. ಇವುಗಳನ್ನು ಯಾವ ಧರ್ಮಶಾಸ್ತ್ರವೂ ಅಕ್ಷೇಪಿಸುವುದಿಲ್ಲ. ಕ್ರಿಸ್ತಯೇಸುವಿಗೆ ಸೇರಿದ ಎಲ್ಲರೂ ತಮ್ಮ ದೈಹಿಕ ವ್ಯಾಮೋಹವನ್ನು, ಅದರ ಆಶಾಪಾಶಗಳ ಹಾಗೂ ದುರಿಚ್ಚೆಗಳ ಸಮೇತ ಶಿಲುಬೆಗೆ ಜಡಿದುಬಿಟ್ಟಿದ್ದಾರೆ. ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು.
ಕೀರ್ತನೆ: 1: 1-2, 3, 4, 6
ಶ್ಲೋಕ: ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ; ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಶುಭಸಂದೇಶ: ಲೂಕ: 11: -42-46
"ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. "ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ," ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ನನು, "ಭೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು," ಎಂದನು. ಅದಕ್ಕೆ ಯೇಸು, "ಶಾಸ್ತ್ರಜ್ನರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ," ಎಂದರು.
No comments:
Post a Comment