ವರ್ಷದ 29ನೇ ಭಾನುವಾರ
ಮೊದಲನೆಯ ವಾಚನ
ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ 53: 10-11
“ಇವನು ತನ್ನ
ಪಾಪಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ.
ಈ ಪರಿ ಕಾಣುವನು ತನ್ನ ಸಿರಿ ಸಂತಾನವನು.”
ಸರ್ವೇಶ್ವರನ ಚಿತ್ತದಂತೆ
ಜಜ್ಜರಿತವಾದ ಹಿಂಸೆಬಾಧೆಗಳಿಂದ
ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೇ ಸಮರ್ಪಿಸಿದ.
ಈ ಪರಿ ಕಾಣುವನು ತನ್ನ ಸಿರಿಸಂತಾನವನು,
ಪಡೆಯುವನು ಚಿರಜೀವವನು
ತಾನೇ ನೆರವೇರಿಸುವನು ಸರ್ವೇಶ್ವರನ ಸಂಕಲ್ಪವನು.
ತೃಪ್ತನಾಗುವನಾತ ಕಂಡು ತನ್ನ
ಪ್ರಾಣಯಾತನೆಯ ಫಲವನು.
ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು.
ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು.
- ದೇವರ ವಾಕ್ಯವಿದು
ಕೀರ್ತನೆ 33: 4-5, 18-19, 20, 22. 22
ಶ್ಲೋಕ : ನಮ್ಮ
ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ
|
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ 4: 14-16
“ನಾವು
ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.”
ಸಹೋದರರೇ, ಸ್ವರ್ಗಲೋಕಕ್ಕೆ
ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು
ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು,
ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು
ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ
ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.
- ದೇವರ ವಾಕ್ಯವಿದು.
ಘೋಷಣೆ ಯೊವಾನ್ನ 8: 12
ಅಲ್ಲೆಲೂಯ, ಅಲ್ಲೆಲೂಯ
!
ನಾನೇ ಜಗಜ್ಯೋತಿ; ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ.
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
ಅಲ್ಲೆಲೂಯ !
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ 10: 35-45
“ನರಪುತ್ರನು
ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೆ ಬಂದಿದ್ದಾನೆ.”
ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, ಗುರುವೇ, ನಮ್ಮದೊಂದು
ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು,” ಎಂದು
ವಿಜ್ಞಾಪಿಸಿಕೊಂಡರು. “ನನ್ನಿಂದ ನಿಮಗೇನಾಗಬೇಕು?” ಎಂದು ಯೇಸು ಕೇಳಿದರು. “ತಮ್ಮ
ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ
ಆಸೀನರಾಗುವಂತೆ ಅನುಗ್ರಹಿಸಬೇಕು,” ಎಂದು ತಮ್ಮ
ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು,
“ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು
ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ನಾನವನ್ನು ಪಡೆಯಲು ನಿಮ್ಮಿಂದ
ಆದೀತೆ?” ಎಂದು ಪ್ರಶ್ನಿಸಿದರು. “ಹೌದು
ಆಗುತ್ತದೆ,” ಎಂದು ಮರು ನುಡಿದರು. ಆಗ ಯೇಸು, “ನಾನು ಕುಡಿಯಲಿರುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ.
ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು
ನನ್ನದಲ್ಲ. ಅದು ಯಾರಿಗಾಗಿ ಸಿದ್ಧ ಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು
ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ ಯೊವಾನ್ನರ ಮೇಲೆ
ಸಿಟ್ಟುಗೊಂಡರು. ಆಗ ಯೇಸು
ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, “ಪ್ರಜಾಧಿಪತಿಗಳು ಎನಿಸಿಕೊಳ್ಳುವವರು
ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು
ಸಹ ಸೇವೆಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ
ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು
ಬೋಧಿಸಿದರು.
- ಪ್ರಭು ಕ್ರಿಸ್ತರ ಶುಭಸಂದೇಶವಿದು.
No comments:
Post a Comment