ಸಾಧಾರಣ ಕಾಲದ 28ನೇ - ಶನಿವಾರ
ಮೊದಲನೇ ವಾಚನ: ಎಫೆಸಿಯರಿಗೆ: 1 : 15-32
ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ವಿಶ್ವಾಸ ಹಾಗೂ ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯನ್ನು ಕುರಿತು ಕೇಳಿದ್ದೇನೆ. ಅಂದಿನಿಂದ ನಿಮ್ಮ ಸಲುವಾಗಿ ದೇವರಿಗೆ ಸದಾ ಕೃತಜ್ನತಾಸ್ತುತಿ ಸಲ್ಲಿಸಿ, ನನ್ನ ಪ್ರಾರ್ಥನೆಯಲ್ಲಿ ನಿಮ್ಮನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ನಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ. ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು. ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಅಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು. ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ. ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.
ಕೀರ್ತನೆ: 8: 2-3ಎಬಿ, 4-5, 6-7
ಶ್ಲೋಕ: ಒಡೆಯನಾಗಿಸಿದೆ ಪ್ರಭೂ ಮಾನವನನು ನಿನ್ನಯ ಕರಕೃತಿಗಳಿಗೆ.
ಶುಭಸಂದೇಶ: ಲೂಕ: 12: 8-12
"ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸುತ್ತಾನೋ, ಅವನನ್ನು ದೇವದೂತರ ಮುಂದೆ ನಿರಾಕರಿಸಲಾಗುವುದೆಂಬುದು ನಿಶ್ಚಯ. "ಯಾವನಾದರೂ ನರಪುತ್ರನ ವಿರುದ್ದ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು. "ಪ್ರಾರ್ಥನಾಮಂದಿರಗಳಲ್ಲಿ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸಿವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು," ಎಂದರು.
No comments:
Post a Comment