ಸಾಧಾರಣ ಕಾಲದ 30ನೇ - ಸೋಮವಾರ
ಮೊದಲನೇ ವಾಚನ: ಎಫೆಸಿಯರಿಗೆ: 4: 32 - 5:8
ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸು ಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರನೊಬ್ಬರು ಕ್ಷಮಿಸಿರಿ. ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. ಕ್ರಿಸ್ತಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ, ನೀವು ಪ್ರೀತಿಯಿಂದ ಬಾಳಿರಿ. ನೀವು ದೇವಜನರಾಗಿರುವುದರಿಂದ ನಿಮ್ಮಲ್ಲಿ ಲೈಂಗಿಕ ಪಾಪವಾಗಲಿ, ಅಶುದ್ದ ಕೃತ್ಯಗಳಾಗಲಿ ಮತ್ತು ದುರಾಶೆಯಾಗಲಿ ಇರಬಾರದು. ಇಂಥ ಸುದ್ದಿಗೂ ನೀವು ಅವಕಾಶ ಕೊಡಬಾರದು. ಹೊಲಸು ಮಾತುಗಳು, ಬರಡು ನುಡಿಗಳು, ಕುಚೋಧ್ಯ ಪದಗಳು ಯಾವುವು ನಿಮಗೆ ತರವಲ್ಲ. ಪ್ರತಿಯಾಗಿ, ದೇವರಿಗೆ ನೀವು ಕೃತಜ್ನತಾ ಸ್ತುತಿ ಮಾಡಿರಿ. ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ ಕ್ರಿಸ್ತಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ. ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ. ಅಂಥವರ ಸಹವಾಸವೇ ನಿಮಗೆ ಬೇಡ. ನೀವು ಹಿಂದೊಮ್ಮೆ ಕತ್ತಲುಮಯವಾಗಿದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ.
ಕೀರ್ತನೆ: 1: 1-2, 3,4,6
ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು.
ಶುಭಸಂದೇಶ: ಲೂಕ: 13: 10-17
ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಭೋಧಿಸುತ್ತಿದ್ದರು. ಹದಿನೆಂಟು ವರ್ಷಗಳಿಂದ ದೆವ್ವ ಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, "ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ," ಎಂದು ಹೇಳಿ, ಆಕೆಯ ಮೇಲೆ ತಮ ಹಸ್ತಗಳನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು. ಯೇಸು ಸಬ್ಬತ್ ದಿನದಲ್ಲಿ ಗುಣ ಮಾಡಿದ್ದನ್ನು ಕಂಡು, ಪ್ರಾರ್ಥನಾ ಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, "ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣ ಮಾಡಿಸಿಕೊಳ್ಳಿರಿ; ಸಬ್ಬತ್ ದಿನದಲ್ಲಿ ಮಾತ್ರ ಕೂಡದು." ಎಂದನು. ಪ್ರಭು ಅವನಿಗೆ ಪ್ರತ್ಯುತ್ತರವಾಗಿ, "ಕಪಟಿಗಳೇ, ಸಬ್ಬತ್ ದಿನ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೇ? ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿ ಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್ ದಿನ ಬಿಡಿಸಬಾರದಿತ್ತೆ?" ಎಂದರು. ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷ ಪಟ್ಟಿತು.
No comments:
Post a Comment