28.10.2018

ಸಾಧಾರಣ ಕಾಲದ 30ನೇ - ಭಾನುವಾರ

ಮೊದಲನೇ ವಾಚನ: ಯೆರೆಮೀಯ: 31: 7-9

ಸರ್ವೇಶ್ವರ ಹೀಗೆನ್ನುತ್ತಾರೆ: "ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳ ಶಿರೋಮಣಿಗೆ ಜೈಕಾರ ಮಾಡಿರಿ. ’ಸರ್ವೇಶ್ವರ ಅಳಿದುಳಿದ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿರಿಸಿರಿ. ಇಗೋ ನೋಡು, ಅವರನ್ನು ಬರಮಾಡುವೆನು ಉತ್ತರ ದೇಶದಿಂದ ಅವರನ್ನು ಒಂದುಗೂಡಿಸುವೆನು ದಿಗಂತಗಳಿಂದ. ಅವರೊಡನೆ ಕುರುಡರನ್ನೂ ಕುಂಟರನ್ನೂ ಗರ್ಭಿನಿಯರನ್ನೂ ದಿನತುಂಬಿದ ಬಸುರಿಯರನ್ನೂ ಒಟ್ಟಿಗೆ ಕರೆತರುವೆನು. ಅವರು ದೊಡ್ಡ ಗುಂಪಾಗಿ ಇಲ್ಲಿಗೆ ಹಿಂದಿರುಗುವರು. ಕಣ್ಣೀರಿಡುತ್ತಾ ಹೋದವರು ಹಿಂದಿರುಗಿ ಬರುವರು. ಪ್ರಾರ್ಥಿಸುತ್ತಾ ಅವರು ಮುನ್ನಡೆಯುವಂತೆ ಮಾಡುವೆನು ಎಡವಲಾಗದ ಸಮಮಾರ್ಗದಲ್ಲಿ ಅವರನ್ನು ನಡೆಸುವೆನು ತುಂಬಿದ ತೊರೆಯ ಬಳಿಗೆ ಬರಮಾಡುವೆನು. 

ಕೀರ್ತನೆ: 126: 1-2, 2-3, 4-5, 6.
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ.

ಎರಡನೆಯ ವಾಚನ: ಹಿಬ್ರಿಯರಿಗೆ: 5: 1-6


ಪ್ರತಿಯೊಬ್ಬ ಪ್ರಧಾನ ಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ನಾನಿಗಳನ್ನು ದುರ್ಮಾರ್ಗಿಗಳನ್ನು ಸಹಾನುಭೂತಿಯಿಂದ ಕಾಣಬಲ್ಲನು. ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕ ಬಲಿಯನ್ನು ಅರ್ಪಿಸಬೇಕಾಗಿದೆ. ಅಲ್ಲದೆ, ಪ್ರಧಾನ ಯಾಜಕನೆಂಬ ಗೌರವ ಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. ಅದೇ ರೀತಿ ಕ್ರಿಸ್ತ ಯೇಸು, ಪ್ರಧಾನ ಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. "ನೀನೇ ನನ್ನ ಪುತ್ರನು: ನಾನೇ ನಿನ್ನನ್ನು ಪಡೆದಿದ್ದೇನೆ." ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅವರೇ ಮತ್ತೊಂದು ಕಡೆಯಲ್ಲಿ: " ನೀನು ಸದಾಕಾಲವು ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ," ಎಂದಿದ್ದಾರೆ.

ಶುಭಸಂದೇಶ: ಮಾರ್ಕ: 10: 46-52

ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೋ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್ ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ ಅವನು, "ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ," ಎಂದು ಗಟ್ಟಿಯಾಗಿ ಕೂಗಿಕೊಂಡನು ಅನೇಕರು ’ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ್, ನನಗೆ ದಯೆತೋರಿ," ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, "ಅವನನ್ನು ಕರೆದುಕೊಂಡು ಬನ್ನಿ," ಎಂದು ಅಪ್ಪಣೆ ಮಾಡಿದರು. ಅವರು ಹೋಗಿ, "ಏಳು ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ," ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. ಯೇಸು, "ನನ್ನಿಂದ ನಿನಗೆ ಏನಾಗಬೇಕು?" ಎಂದು ಕೇಳಿದರು. ಅದಕ್ಕೆ ಅವನು, "ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ," ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, "ಹೋಗು ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ," ಎಂದರು. ಆ ಕ್ಷಣವೇ ಅವನಿಗೆ ದೃಷ್ಠಿಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...