ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.10.2018

ಸಾಧಾರಣ ಕಾಲದ 26ನೇ - ಸೋಮವಾರ

ಮೊದಲನೇ ವಾಚನ: ಯೋಬ 1:6-22

ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನೂ ಅಲ್ಲಿಗೆ ಬಂದನು. ಸರ್ವೇಶ್ವರ ಸೈತಾನನ್ನು ನೋಡಿ, "ಎಲ್ಲಿಂದ ಬಂದೆ?" ಎಂದು ಕೇಳಿದರು. ಅದಕ್ಕೆ ಅವನು, "ಭೂಲೋಕದಲ್ಲಿ ಗಸ್ತುತಿರುಗಿ ಬಂದಿದ್ದೇನೆ" ಎಂದನು. ಆಗ ಸರ್ವೇಶ್ವರ, "ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂಸಿಗನು, ಎಂದು ಹೇಳಿದರು. ಅದಕ್ಕೆ ಸೈತಾನನು ಹೀಗೆ ಹೇಳಿದನು: "ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ? ನೀವು ಆತನಿಗೂ ಆತನ ಎಲ್ಲ ಆಸ್ತಿ ಪಾಸ್ತಿಗೂ ಬೇಲಿ ಹಾಕಿ ಭದ್ರ ಪಡಿಸಿದ್ದೀರಲ್ಲವೇ ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೇ? ಎಂದೇ ಅವನ ಸಿರಿ ಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ. ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ, ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!" ಎಂದನು. ಸರ್ವೇಶ್ವರ ಸೈತಾನನಿಗೆ, "ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ", ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರ ಸನ್ನಿಧಾನದಿಂದ ಹೊರಟುಹೋದನು. ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣ ಮಾಡುತ್ತಿದ್ದರು. ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, "ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೆಯುತ್ತಾ ಇದ್ದವು. ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದು ಕೊಂಡು ಹೋದರು. ಕೂಲಿ ಆಳುಗಳನ್ನು ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿ ಬಂದೆ. " ಎಂದನು. ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, "ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ, ಕೂಲಿ ಆಳುಗಳನ್ನೂ ಸುಟ್ಟು ಭಸ್ಮ ಮಾಡಿತು.  ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿ ಬಂದೆ," ಎಂದನು. ಅಷ್ಟರಲ್ಲಿ ಇನ್ನೊಬ್ಬನು ಬಂದು "ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡು ಹೋದರು. ಅಲ್ಲದೆ ಆ ಕೂಲಿ ಅಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿ ಬಂದೆ," ಎಂದನು. ಅವನು ವರದಿ ಮಾಡುತ್ತಿದ್ಧಾಗಲೇ ಬೇರೊಬ್ಬನು ಬಂದು "ನಿಮ್ಮ ಪುತ್ರ ಪುತ್ರಿಯರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು. ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು ಯುವಕ ಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ಧಿಯನ್ನು ನಿಮಗೆ ತಂದಿದ್ದೇನೆ"ಎಂದು ತಿಳಿಸಿದನು. ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ, ತಲೆಯನ್ನು ಬೋಳಿಸಿಕೊಂಡು ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ; ಬರಿಗೈಯಲ್ಲಿ ಬಂದೆ ನಾನು ತಾಯಗರ್ಭದಿಂದ ಬರಿಗೈಯಲ್ಲಿ ಹಿಂತಿರುಗುವೆ ನಾನು ಇಲ್ಲಿಂದ ಸರ್ವೇಶ್ವರ ಕೊಟ್ಟ ಸರ್ವೇಶ್ವರ ತೆಗೆದುಕೊಂಡ ಆತನ ನಾಮಕ್ಕೆ ಸ್ತುತಿಸ್ತೋತ್ರ! ಎಂದನು. ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪ ಮಾಡಲಿಲ್ಲ ದೇವರ ಮೇಲೆ ತಪ್ಪು ಹೊರಿಸಲಿಲ್ಲ.

ಕೀರ್ತನೆ: 17:1bcd, 2-3, 6-7
ಶ್ಲೋಕ: ಮೊರೆಯಿಡುವೆ ದೇವಾ ಕಿವಿಗೊಟ್ಟು ಆಲಿಸಯ್ಯ

ಶುಭಸಂದೇಶ: ಲೂಕ 9:46-50

ಒಮ್ಮೆ ತಮ್ಮಲ್ಲಿ ಅತಿ ಶ್ರೇಷ್ಠನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ  ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದು ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು," ಎಂದರು. ಆಗ ಯೊವಾನ್ನನು ಯೇಸುವಿಗೆ, "ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು," ಎಂದನು. ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾಧಿ," ಎಂದು ಉತ್ತರಕೊಟ್ಟರು.

No comments:

Post a Comment