ಸಾಧಾರಣ ಕಾಲದ 26ನೇ ಶನಿವಾರ
ಮೊದಲನೇ ವಾಚನ: ಯೋಬ: 42:1-3, 5-6, 12-17
ಆಗ ಯೋಬನು ಸರ್ವೇಶ್ವರ ಸ್ವಾಮಿಗೆ ಕೊಟ್ಟ ಉತ್ತರ ಇದು: "ತಾವು ಎಲ್ಲಾ ಕಾರ್ಯಗಳನ್ನು ನಡೆಸಲು ಶಕ್ತರೆಂದು ನಾನು ಬಲ್ಲೆ, ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ. "ಅಜ್ಞಾನದ ಮಾತುಗಳನ್ನಾಡುವ ನೀನು ಯಾರು? ಸತ್ಯಾಲೋಚನೆಗಳನ್ನು ಮಂಕುಮಾಡುವ ನೀನಾರು?" ಈ ನಿಮ್ಮ ನುಡಿಯಂತೆ ಅರ್ಥ ಹೀನ ಮಾತುಗಳನ್ನು ನಾನಾಡಿದೆ. ನನ್ನ ಬುದ್ಧಿಗೆಟುಕದ ಪವಾಡಗಳನ್ನು ಟೀಕಿಸಿದೆ. ಈವರೆಗೆ ನಿಮ್ಮನ್ನು ಕುರಿತು ನಾನು ಕೇಳಿದ್ದು ಬೇರೆಯವರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ. ಬೂದಿಯಲ್ಲೂ, ಧೂಳಿನಲ್ಲೂ ಕುಳಿತು ಪಶ್ಚತ್ತಾಪಪಡುತ್ತೇನೆ," ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಆತನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು. ಆವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು. ಅಲ್ಲದೆ ಏಳು ಮಂದಿ ಗಂಡು ಮಕ್ಕಳು, ಮೂರು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ನಪ್ಪೂಕ್ ಎಂದು ಹೆಸರಿಟ್ಟನು. ಯೋಬನ ಮಕ್ಕಳು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸ್ವತ್ತನ್ನು ಹಂಚಿದನು. ತರುವಾಯ ಯೋಬನು ನೂರನಲ್ವತ್ತು ವರ್ಷ ಬಾಳಿದನು. ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು. ಹಣ್ಣು ಹಣ್ಣು ಮುದುಕನಾಗಿ ಸತ್ತನು.
ಕೀರ್ತನೆ: 119:66, 71, 75, 91, 125, 130
ಶ್ಲೋಕ: ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ.
ಶುಭಸಂದೇಶ: ಲೂಕ 10:17-24
ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ, ನಿಮ್ಮ ಹೆಸರಿನಲ್ಲಿ ಆಜ್ಞೆ ಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತದೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿ ಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿದೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿದೆ ಎಂದು ಸಂತೋಷಪಡಿ." ಎಂದು ಹೇಳಿದರು.
ಚಿಂತನೆ : ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಹೆಮ್ಮೆ ಪಡುವಂತಹ ವರವನ್ನು ಶಕ್ತಿಯನ್ನು ತಮ್ಮ ಶಿಷ್ಯರಿಗೆ, ಆರಿಸಿಕೊಂಡ ಜನರಿಗೆ ಕೊಟ್ಟರೂ ಅದಕ್ಕಿಂತ ಮೇಲಾದುದು ’ಸ್ವರ್ಗದ ಭಾಗ್ಯ’ ಎನ್ನುತ್ತಾರೆ ಯೇಸು. ದೇವರು ನಮಗೆ ದಯಾಪಾಲಿಸಿರುವ ಪ್ರತಿಭೆ, ಸಾಮರ್ಥ್ಯ, ವರಗಳು, ಸಂಪತ್ತು, ಕುಟುಂಬವೆಲ್ಲದಕ್ಕೂ ನಾವು ದೇವರಿಗೆ ಧನ್ಯರಾಗಿರಬೇಕು. ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ ನಾವು ಹಾತೊರೆಯಬೇಕಾಗಿರುವುದು ಸ್ವರ್ಗದಲ್ಲಿನ ನಮ್ಮ ಸ್ಥಾನಕ್ಕಾಗಿ. ಆ ಸ್ಥಾನವನ್ನು ನಾವು ಗಳಿಸಬೇಕಾದುದು ಕ್ರಿಸ್ತನ ಮೂಲಕ ಮತ್ತು ಆತನ ವಾಕ್ಯಗಳನ್ನು ಪಾಲಿಸಿವುದರಿಂದಲೇ ಅಲ್ಲವೇ?
ಶುಭ ಸಂದೇಶದ ಜೋತೆ ವಾಚನದ ಚಿಂತನೆ ಸೇರಿಸಿ
ReplyDelete