ಸಾಧಾರಣ ಕಾಲದ ೨೯ನೇ - ಸೋಮವಾರ
ಮೊದಲನೆಯ ವಾಚನ: ಸಂತ ಪೌಲನು ಎಫೆಸಿಯರಿಗೆ ಬರೆದ ಮೊದಲನೆಯ ಪತ್ರದಿಂದ ವಾಚನ2:1-10
“ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ದೇವರು ಕ್ರಿಸ್ತಯೇಸುವಿನೊಡನೆಜೀವಂತರನ್ನಾಗಿ ಮಾಡಿದರು.
”ಸಹೋದರರೇ, ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ. ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ. ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆ ಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು. ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ, ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತ ಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು. ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರಹೊಂದಿದ್ದೀರಿ. ಯೇಸುಕ್ರಿಸ್ತರೊಡನೆ ನಮ್ಮನ್ನು ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು. ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು.ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ, ದೇವರಿತ್ತ ವರಪ್ರಸಾದ. ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ. ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತ ಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.
ದೇವರ ವಾಕ್ಯವಿದು.
ಕೀರ್ತನೆ 100:1-4, ಗಿ. 3
ಶ್ಲೋಕ : ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು.
ಘೋಷಣೆ ಲೂಕ 8:15
ಅಲ್ಲೆಲೂಯ, ಅಲ್ಲೆಲೂಯ !
ದೇವರ ವಾಕ್ಯವನ್ನು ಕೇಳಿ ಅದನ್ನುಸದ್ಗುಣ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟುಸಹನೆಯಿಂದ ಫಲತರುವವರು ಧನ್ಯರು.ಅಲ್ಲೆಲೂಯ !
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ12:13-21
“ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?."
ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿಕೊಡುವಂತೆ ನನ್ನ ಸಹೋದರನಿಗೆ ಹೇಳಿ,” ಎಂದು ಕೇಳಿಕೊಂಡನು. ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯ ತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು. ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು. ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು. ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ, ‘ಹೌದು,ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕು ಸಾಮಾಗ್ರಿಗಳನ್ನೂ ತುಂಬಿಸಿಡುತ್ತೇನೆ. ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು” ಎಂದು ಹೇಳಿಕೊಳ್ಳುತ್ತೇನೆ.’ ಎಂದುಕೊಂಡ. ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು. ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ಸೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು.
ಪ್ರಭು ಕ್ರಿಸ್ತರ ಶುಭಸಂದೇಶವಿದು.
No comments:
Post a Comment