ಸಾಧಾರಣ ಕಾಲದ 28ನೇ - ಮಂಗಳವಾರ
ಮೊದಲನೇ ವಾಚನ: ಗಲಾತ್ಯರಿಗೆ: 5: 1-6
ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ. ಪೌಲನಾದ ನಾನು ಹೇಳುವುದನ್ನು ಕೇಳಿ: ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತ ಯೇಸುವಿನಿಂದ ನಿಮಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳುವ ಪ್ರತಿಯೊಬ್ಬನೂ ಇಡೀ ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಲು ಬದ್ದನಾಗಿದ್ದಾನೆ ಎಂದು ಪುನಃ ನಿಮಗೆ ನಾನು ಒತ್ತಿ ಹೇಳುತ್ತೇನೆ. ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಹದಿಂದ ದೂರವಾಗಿದ್ದೀರಿ. ನಾವಾದರೋ ಪವಿತ್ರಾತ್ಮರ ಮುಖಾಂತರ ವಿಶ್ವಾಸದಿಂದ ದೇವರೊಂದಿಗೆ ಸತ್ಸಂಬಂಧವನ್ನು ಹೊಂದುತ್ತೇವೆಂಬ ನಿರೀಕ್ಷೆ ಉಳ್ಳವರಾಗಿದ್ದೇವೆ; ಈ ನಿರೀಕ್ಷೆ ಸಫಲವಾಗುವುದನ್ನು ಎದುರುನೋಡುತ್ತಿದ್ದೇವೆ. ಕ್ರಿಸ್ತ ಯೇಸುವಿನಲ್ಲಿ ಬಾಳುವವರಿಗೆ ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ. ಪ್ರೀತಿಯಿಂದ ಕಾರ್ಯ ಎಸಗುವ ವಿಶ್ವಾಸವೇ ಪ್ರಮುಖವಾದುದು.
ಕೀರ್ತನೆ: 119: 41, 43, 44, 45, 47, 48
ಶ್ಲೋಕ: ದೊರಕಲಿ ಪ್ರಭೂ ನನಗೆ, ನಿನ್ನ ಕರುಣೆ.
ಶುಭಸಂದೇಶ: ಲೂಕ: 11: 37-41
ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟ ಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ದಿಯಾಗಿರುವುದು," ಎಂದರು.
No comments:
Post a Comment