ಸಾಧಾರಣ ಕಾಲದ 30ನೇ ಬುಧವಾರ
ಮೊದಲನೇ ವಾಚನ: ಎಫೆಸಿಯರಿಗೆ: 6: 1-9
ಮಕ್ಕಳೇ, ಪ್ರಭುವಿನಲ್ಲಿ ನಿಮ್ಮ ತಂದೆತಾಯಿಗಳ ಮಾತಿಗೆ ಕಿವಿಗೊಡಿ. ಇದು ಧರ್ಮಸಮ್ಮತವಾದುದು. ’ನಿನ್ನ ತಂದೆತಾಯಿಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೇಯ ಆಜ್ನೆ. ಇದನ್ನು ಪಾಲಿಸಿದರೆ ನಿನಗೆ ಶುಭವಾಗುವುದು; ನೀನು ಬಹುಕಾಲ ಬಾಳುವೆ. ತಂದೆತಾಯಿಗಳೇ ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸ ಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ. ಸೇವಕರೇ, ನೀವು ಮಾಡುತ್ತಿರುವುದು ಕ್ರಿಸ್ತಯೇಸುವಿನ ಸೇವೆಯನ್ನೇ ಎಂದು ಭಾವಿಸಿ, ನಿಮ್ಮ ಲೌಕಿಕ ಧಣಿಗಳಿಗೆ ಭಯಭಕ್ತಿಯಿಂದಲೂ ಏಕ ಮನಸ್ಸಿನಿಂದಲೂ ವಿಧೇಯರಾಗಿರಿ. ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಯನ್ನು ಮಾಡದಿರಿ. ಕ್ರಿಸ್ತಯೇಸುವಿನ ದಾಸರಂತೆ ದೈವೇಚ್ಚೆಯನ್ನು ಹೃದಯ ಪೂರ್ವಕವಾಗಿ ಈಡೇರಿಸಿರಿ. ನೀವು ಮಾಡುವುದು ಜನಸೇವೆಯಲ್ಲ, ಪ್ರಭುಸೇವೆ ಎಂದೇ ಭಾವಿಸಿ ನಗುಮುಖದಿಂದ ಸೇವೆಮಾಡಿ. ದಾಸ್ಯದಲ್ಲಿರುವವನಾಗಲಿ, ಸ್ವತಂತ್ರ ಉಳ್ಳವನಾಗಿರಲಿ ಸತ್ಕಾರ್ಯವನ್ನು ಮಾಡುವವನು ಪ್ರಭುವಿನಿಂದ ತಕ್ಕ ಪ್ರತಿಫಲವನ್ನು ಪಡೆದೇ ತೀರುವನೆಂದು ನೀವು ಬಲ್ಲಿರಿ. ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗ ಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.
ಕೀರ್ತನೆ: 145: 10-13ಎಬಿ, 13ಸಿಡಿ-14
ಶ್ಲೋಕ: ನುಡಿಯಲಿ ಪ್ರಭು ಸದಾ ಪ್ರಾಮಾಣಿಕರು.
ಶುಭಸಂದೇಶ: ಲೂಕ: 13: 22-30
ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತಾ ಪ್ರಯಾಣ ಮಾಡುತ್ತಿದ್ದರು. ಆಗ ಒಬ್ಬನು, "ಸ್ವಾಮಿ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೋ?" ಎಂದು ವಿಚಾರಿಸಿದನು. ಆಗ ಯೇಸು ಜನರಿಗೆ, "ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವ ಪ್ರಯತ್ನ ಮಾಡಿ. ಏಕೆಂದರೆ ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ’ಸ್ವಾಮಿ, ನಮಗೆ ಬಾಗಿಲು ತೆರೆಯಿರಿ, ಎಂದು ನೀವು ಕೇಳುವಿರಿ. ಅದಕ್ಕೆ ಅವನು, ’ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು. ಆಗ ನೀವು, ’ನಿಮ್ಮೊಂದಿಗೆ ನಾವು ಊಟ ಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶ ಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. ಆದರೆ ಅವನು ಪುನಃ, ’ನೀವು ಎಲ್ಲಿಯವರೋ ನಾನರಿಯೇ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು. ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲುಕಡಿತವೇನು! ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. "ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು," ಎಂದರು.
No comments:
Post a Comment