21ನೇ ಭಾನುವಾರ
ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ, ಸಮರ್ಪಣೆ -
ಇವು ಹೆಚ್ಚೂ ಕಡಿಮೆ ಸಮಾನಾರ್ಥ ಪದಗಳು. ನಿಷ್ಠಾವಂತ
ಜೀವನ, ಬದ್ಧತೆಯುಳ್ಳ ಬದುಕು, ಪ್ರಾಮಾಣಿಕತೆಯ
ಬಾಳು ಹಾಗೂ ಸಮರ್ಪಣಾ ಮನೋಭಾವ - ಇವು ಒಬ್ಬ ಆದರ್ಶ ವ್ಯಕ್ತಿಯ,
ಒಬ್ಬ ಸತ್ಪುರುಷನ, ಒಬ್ಬ ಸಂತನಲ್ಲಿರುವಂತಹ, ಎಲ್ಲರೂ ಮೆಚ್ಚುವಂತಹ ಅನುಕರುಣೀಯ ಗುಣಗಳು. ಇವು ಇತರರಲ್ಲಿ
ಇರಲೇಬೇಕೆಂದು ಆಶಿಸುವ ಸದ್ಗುಣಗಳು. ಇಂದಿನ ಆರಾಧನ ವಿಧಿಯು, ಪ್ರಭು ಕ್ರಿಸ್ತರ ನೈಜ ಅನುಯಾಯಿಗಳಾಗ ಬಯಸುವವರು ಈ ಗುಣಗಳನ್ನು ಅಳವಡಿಸಿಕೊಳ್ಳ
ಬೇಕಾದಂತಹ ಅನಿವಾರ್ಯತೆಯ ಬಗ್ಗೆ ತಿಳಿಸುತ್ತದೆ.
ಮೊದಲನೆಯ ವಾಚನ
ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಆಯ್ಕೆಗಳನ್ನು ಮಾಡುವುದು ಸುಲಭ. ಆದರೆ, ಹೀಗೆ ತೆಗೆದುಕೊಂಡ ನಿರ್ಧಾರಗಳಿಗೆ
ಮಾಡಿದ ಆಯ್ಕೆಗಳಿಗೆ ಪ್ರಾಮಾಣಿಕರಾಗಿ ನಿಷ್ಠೆಯಿಂದ ಬದ್ಧರಾಗಿರುವುದು ಸುಲಭ ಸಾಧ್ಯವಲ್ಲ.
ಅಂಥ ನಿಷ್ಠೆ ರೂಢಿಸಿಕೊಳ್ಳಲು ಈ ವಾಚನ ಕರೆ ನೀಡುತ್ತದೆ.
ಪ್ರವಾದಿ
ಯೆಹೋಶುವನ ಗ್ರಂಥದಿಂದ ವಾಚನ 24: 1-2, 15-18
ಯೆಹೋಶುವನು ಎಲ್ಲ ಇಸ್ರಯೇಲ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು.
ಹಿರಿಯರು, ನಾಯಕರು, ನ್ಯಾಯಾಧಿಪತಿಗಳು,
ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಉಪಸ್ಥಿತರಾದರು. ಯೆಹೋಶುವ
ಅವರೆಲ್ಲರನ್ನು ಉದ್ದೇಶಿಸಿ, “ನಿಮ್ಮ ದೇವರಾದ ಸರ್ವೇಶ್ವರನಿಗೆ ಸೇವೆ
ಸಲ್ಲಿಸಿರಿ; ನಿಮಗೆ ಇದು ಸರಿಕಾಣದಿದ್ದರೆ ಯಾರಿಗೆ
ಸೇವೆಸಲ್ಲಿಸಬೇಕೆಂದಿದ್ದೀರಿ? ಇಂದೇ ಆರಿಸಿಕೊಳ್ಳಿ: ನಿಮ್ಮ ಪೂರ್ವಜರು
ಯೂಫ್ರೆಟಿಸ್ ನದಿಯ ಆಚೆಯಲ್ಲಿ ಪೂಜಿಸುತ್ತಿದ್ದ ದೇವತೆ ಗಳಿಗೋ? ಈ
ನಾಡಿನ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳಿಗೋ? ಹೇಳಿ. ನಾನು ಮತ್ತು
ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ,”
ಎಂದನು. ಅದಕ್ಕೆ ಜನರು, “ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳಿಗೆ
ಸೇವೆಸಲ್ಲಿಸುವುದು ನಮ್ಮಿಂದ ದೂರವಿರಲಿ. ನಾವು ದಾಸತ್ವದಲ್ಲಿದ್ದ ಈಜಿಪ್ತಿನಿಂದ ನಮ್ಮನ್ನೂ ನಮ್ಮ
ಪೂರ್ವಜರನ್ನೂ ಹೊರತಂದವರು ನಮ್ಮ ದೇವರಾದ ಸರ್ವೇಶ್ವರಸ್ವಾಮಿಯೇ. ನಮ್ಮೆದುರಿನಲ್ಲೇ ಅವರು ಮಾಡಿದ
ಅದ್ಭುತ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಎಲ್ಲಾ ಪ್ರಯಾಣಗಳಲ್ಲೂ ನಾವು ದಾಟಿ ಬಂದ ಜನಾಂಗಗಳಿಂದ
ನಮ್ಮನ್ನು ಕಾಪಾಡಿದವರು ಅವರೇ. ಈ ನಾಡಿನ ನಿವಾಸಿಗಳಾಗಿದ್ದ ಅಮೋರಿ ಯರು ಮೊದಲಾದ ಎಲ್ಲಾ
ಜನಾಂಗಗಳನ್ನು ಇಲ್ಲಿಂದ ಹೊರಡಿಸಿಬಿಟ್ಟವರು ಅವರೇ. ಆದುದರಿಂದ ನಾವು ಕೂಡ ಸರ್ವೇಶ್ವರನಿಗೆ ಸೇವೆ
ಸಲ್ಲಿಸುತ್ತೇವೆ. ಅವರೇ ನಮ್ಮ ದೇವರು,” ಎಂದು ಉತ್ತರಕೊಟ್ಟರು.
- ಪ್ರಭುವಿನ ವಾಕ್ಯ
ಎರಡನೆಯ ವಾಚನ
ಪ್ರಭು ಕ್ರಿಸ್ತರಿಗೆ ನಿಷ್ಠೆ ತೋರುವುದೆಂದರೆ ಅವರಿಗೆ ವಿಧೇಯರಾಗಿರುವುದು. ಹಾಗೆಯೇ, ದಾಂಪತ್ಯ ಜೀವನವು ಪರಸ್ಪರ ಸಮರ್ಪಣೆಯ,
ನಿಷ್ಠೆಯ ಬದುಕಾಗಬೇಕು ಎನ್ನುತ್ತಾರೆ ಸಂತ ಪೌಲ.
ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ 5: 21-32
ಕ್ರಿಸ್ತ ಯೇಸುವಿನಲ್ಲಿ ಭಯಭಕ್ತಿ ಯುಳ್ಳವರಾಗಿದ್ದು ಒಬ್ಬರಿಗೊಬ್ಬರು
ನಮ್ರತೆಯಿಂದ ನಡೆದುಕೊಳ್ಳಿರಿ. ಮಹಿಳೆಯರೇ, ನೀವು ಪ್ರಭುವಿಗೆ ಹೇಗೋ ಹಾಗೆ ನಿಮ್ಮ
ನಿಮ್ಮ ಪತಿಯರಿಗೆ ವಿಧೇಯರಾಗಿರಿ. ಕ್ರಿಸ್ತ ಯೇಸು ಧರ್ಮಸಭೆಯೆಂಬ ದೇಹಕ್ಕೆ ಶಿರಸ್ಸಾಗಿರುವ
ಹಾಗೆಯೇ ಪತಿಯಾದವನು ತನ್ನ ಪತ್ನಿಗೆ ಶಿರಸ್ಸಾಗಿರುತ್ತಾನೆ. ಕ್ರಿಸ್ತ ಯೇಸುವೇ ಧರ್ಮಸಭೆಯ
ಉದ್ಧಾರಕ. ಧರ್ಮಸಭೆ ಕ್ರಿಸ್ತಯೇಸುವಿನ ಆಡಳಿತಕ್ಕೆ ಒಳಪಟ್ಟಿರುವಂತೆ ಪತ್ನಿಯು ಸಹ ಎಲ್ಲಾ
ವಿಷಯಗಳಲ್ಲೂ ತನ್ನ ಪತಿಯ ಆಡಳಿತಕ್ಕೆ ಒಳಪಟ್ಟಿರಬೇಕು. ಪುರುಷರೇ, ಕ್ರಿಸ್ತಯೇಸು
ಧರ್ಮಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಧರ್ಮಸಭೆಯನ್ನು
ಪಾವನಗೊಳಿಸುವುದಕ್ಕಾಗಿ ಕ್ರಿಸ್ತ ಯೇಸು ತಮ್ಮ ಪ್ರಾಣವನ್ನೇ ಕೊಟ್ಟರು. ವಾಕ್ಯೋಪದೇಶದಿಂದಲೂ
ಜಲಸ್ನಾನದಿಂದಲೂ ಅದನ್ನು ಶುದ್ಧೀಕರಿಸಿದರು. ಧರ್ಮಸಭೆ ಕಳಂಕ ಕಲ್ಮಷವಾಗಲಿ, ಸುಕ್ಕು ಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿ ಕೊಳ್ಳುವಂತೆ ಹೀಗೆ
ಮಾಡಿದರು. ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು
ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ. ಸ್ವಂತ
ಶರೀರವನ್ನು ಯಾರೂ ಎಂದೂ ದ್ವೇಷಿಸುವುದಿಲ್ಲ. ಬದಲಿಗೆ ಅದನ್ನು ಪೋಷಿಸಿ ಪಾಲನೆ ಮಾಡುತ್ತಾನೆ.
ಧರ್ಮಸಭೆಯನ್ನು ಸಹ ಕ್ರಿಸ್ತ ಯೇಸು ಹೀಗೆಯೇ ಕಾಪಾಡುತ್ತಾರೆ. ನಾವು ಆ ಸಭೆಯ ಅಂಗಗಳು. ಪವಿತ್ರ
ಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ಈ ಕಾರಣದಿಂದ ಪುರುಷನಾದವನು ತನ್ನ ತಂದೆತಾಯಿಗಳನ್ನು ಬಿಟ್ಟು
ತನ್ನ ಪತ್ನಿಯೊಡನೆ ಒಂದುಗೂಡುವನು ಮತ್ತು ಅವರಿಬ್ಬರೂ ಒಂದೇ ಶರೀರವಾಗುವರು,” ಈ ಗಹನವಾದ ರಹಸ್ಯವು ಯೇಸುಕ್ರಿಸ್ತರಿಗೂ ಧರ್ಮಸಭೆಗೂ ಇರುವ ಸಂಬಂಧವನ್ನು
ಸೂಚಿಸುತ್ತದೆ, ಎಂಬುದೇ ನನ್ನ ಅಭಿಪ್ರಾಯ.
- ಪ್ರಭುವಿನ ವಾಕ್ಯ
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ನಮ್ಮ ಪ್ರಭು ಯೇಸುಕ್ರಿಸ್ತರ ದೇವರು ನಿಮ್ಮ ಮನೋ ನೇತ್ರಗಳನ್ನು ತೆರೆಯಲಿ; ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದೆಂದು ನೀವು
ಅರಿತುಕೊಳ್ಳಬೇಕು. ಅಲ್ಲೆಲೂಯ!
ಶುಭಸಂದೇಶ
ಸಂತ ಯೊವಾನ್ನರು ಬರೆದ ಶುಭಸಂದೇಶದಿಂದ ವಾಚನ 6: 60-69
ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರು ತಾನೆ ಕೇಳಿಯಾರು?” ಎಂದು ಮಾತನಾಡಿ ಕೊಂಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು
ಯೇಸು ತಾವಾಗಿಯೇ ಅರಿತು, “ಇಷ್ಟು ಮಾತ್ರಕ್ಕೆ ನೀವು ಕಂಗೆಡಬೇಕೇ?
ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು
ಕಂಡಾಗ ಏನೆನ್ನುವಿರಿ? ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ.
ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು
ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು.
(ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ
ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.) “ಪಿತನು
ಅನುಗ್ರಹಿಸದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು
ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು. ಅಂದಿನಿಂದ
ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ
ಬರಲಿಲ್ಲ. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ
ಹೋಗಬೇಕೆಂದು ಇದ್ದೀರಾ?” ಎಂದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು,
“ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ?
ನಿತ್ಯ ಜೀವವನ್ನೀಯುವ ನುಡಿಯಿರುವುದು ತಮ್ಮಲ್ಲೇ. ತಾವೇ ದೇವರಿಂದ ಬಂದ ಪರಮ ಪೂಜ್ಯರು.
ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,”
ಎಂದು ಹೇಳಿದನು.
- ಪ್ರಭುಕ್ರಿಸ್ತರ ಶುಭಸಂದೇಶ
No comments:
Post a Comment