ಸಾಧಾರಣ ಕಾಲದ 21ನೇ - ಮಂಗಳವಾರ
ಮೊದಲನೇ ವಾಚನ: 2 ಥೆಸಲೋನಿಯರಿಗೆ 2: 1-3, 14-17
ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪುನರಾಗಮನವನ್ನು ಮತ್ತು ನಾವು ಅವರ ಸನ್ನಿಧಿಯಲ್ಲಿ ಒಂದಾಗಿ ಸೇರುವ ವಿಷಯವನ್ನು ಕುರಿತು ನಿಮ್ಮಲ್ಲಿ ನಾವು ವಿನಂತಿಸುವುದೇನೆಂದರೆ: ಪ್ರಭುವಿನ ದಿನವು ಬಂದೇ ಬಿಟ್ಟಿತೆಂದು ಪ್ರವಾದನೆಯಿಂದಾಗಲಿ, ಪ್ರವಚನದಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ತಿಳಿದು ಬಂದಿದೆಯಂದು ಯಾರಾದರು ಹೇಳಿದರೆ, ಒಮ್ಮೆಗೇ ನೀವು ತಬ್ಬಿಬ್ಬಾಗಿ, ತಳಮಳಗೊಳ್ಳದಿರಿ. ನಿಮ್ಮನ್ನು ಯಾರೂ ಯಾವ ರೀತಿಯಲ್ಲೂ ವಂಚಿಸದಿರಲಿ. ಆ ದಿನವು ಬರುವುದಕ್ಕೆ ಮುಂಚೆ ದೇವರಿಗೆ ವಿರುದ್ದವಾದ ’ಅಂತಿಮ ಪ್ರತಿಭಟನೆ’ ಉಂಟಾಗುವುದು. ’ಪಾಪ ಪುರುಷನಾದ’ ಅಧರ್ಮಿ ತಲೆಯತ್ತಿಕೊಳ್ಳುವನು. ಹೀಗೆ ಉದ್ದಾರ ಹೊಂದಿ ನಮ್ಮ ಪ್ರಭು ಯೇಸುಕ್ರಿಸ್ತರ ಮಹಿಮೆಯಲ್ಲಿ ನೀವು ಸಹ ಪಾಲುಗೊಳ್ಳುವಂತೆ, ನಾವು ಸಾರಿದ ಶುಭಸಂದೇಶದ ಮೂಲಕ ದೇವರು ನಿಮ್ಮನ್ನು ಕರೆದಿದ್ದಾರೆ. ಆದ್ದರಿಂದ ಸಹೋದರರೇ, ನಾವು ನಿಮಗೆ ಬಾಯಿ ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ಬೋಧಿಸಿರುವ ಸತ್-ಸಂಪ್ರದಾಯಗಳನ್ನು ಪ್ರಾಮಾಣಿಕವಾಗಿ ಪಾಲಿಸುತ್ತಾ ಸ್ಥಿರವಾಗಿ ನಿಲ್ಲಿರಿ. ನಮ್ಮನ್ನು ಪ್ರೀತಿಸಿ ನಿತ್ಯಾಧಾರಣೆಯನ್ನು ಉತ್ತಮ ನಿರೀಕ್ಷೆಯನ್ನು ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸು ಕ್ರಿಸ್ತ್ರರು ಹಾಗು ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲೂ ನಿಮ್ಮನ್ನು ದೃಢಪಡಿಸಲಿ.
ಕೀರ್ತನೆ: 96: 10, 11-12, 13
ಶ್ಲೋಕ: ಪ್ರಭು ಧರೆಗೆ ನ್ಯಾಯ ತೀರಿಸಲು ಬಂದೇಬರುವನು ಖರೆಯಾಗಿ.
ಶುಭಸಂದೇಶ: ಮತ್ತಾಯ: 23: 23-26
ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ ನಿಮಗೆ ಧಿಕ್ಕಾರ! ನೀವು ಪುದೀನ ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯ ನೀತಿ, ದಯೆ ದಾಕ್ಷೀಣ್ಯ, ಪ್ರಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನು ಅನುಷ್ಟಾನಕ್ಕೆ ತರಲೇಬೇಕಿತ್ತು. ಅಂಧ ನಿರ್ದೇಶಕರೇ ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ, ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ. ಕಪಟ ಧರ್ಮಶಾಸ್ತ್ರಿಗಳೇ ಮತ್ತೆ ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆ ಲೋಟಗಳ ಹೊರ ಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳೆ ಹಾಗು ಲೋಭದ ಗಳಿಕೆಗಳಿಂದ ತುಂಬಿಹೋಗಿದೆ. ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರ ಭಾಗವೂ ಶುಚಿಯಾಗುವುದು.
No comments:
Post a Comment