ಸಾಧಾರಣ ಕಾಲದ ಹತ್ತೊಂಭತ್ತೆನೆಯ ವಾರ - ಗುರುವಾರ
ಮೊದಲನೇ ವಾಚನ: ಯೆಜೆಕಿಯೇಲ: 12: 1-12
ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು: "ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು. "ನರಪುತ್ರನೇ, ವಲಸೆ ಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೇ ಹೊರಡು. ಅಂದರೆ, ನಿನ್ನ ವಾಸ ಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು: ಅವರು ದ್ರೋಹಿ ವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು. ನೀನು ನಿನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೊ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟು ಹೋಗು. ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು. ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆ ಹಾಕಿ, ಕತ್ತಲಲ್ಲಿ ಹೊತ್ತುಕೊಂಡು ಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ." ಆಗ ನಾನು ನನಗಾದ ಅಪ್ಪಣೆಯನ್ನು ನೆರೆವೇರಿಸಿದೆ: ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಮನೆಯೊಳಗಿನಿಂದ ಆಚೆಗೆ ಹಾಕಿದೆ; ಸಾಯಂಕಲ ನನ್ನ ಕೈಯಿಂದಲೇ ಗೋಡೆಯನ್ನು ಕಿಂಡಿ ಮಾಡಿ, ಕತ್ತಲಲ್ಲಿ ಆ ಸಾಮಗ್ರಿಗಳನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆ. ಬೆಳಗ್ಗೆ ಸರ್ವೇಶ್ವರನಿಂದ ಈ ವಾಣಿ ನನಗೆ ಕೇಳಿಸಿತು: "ನರ ಪುತ್ರನೇ ದ್ರೋಹಿ ವಂಶದವರಾದ ಇಸ್ರಯೇಲರು, ’ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೇ? ನೀನು ಅವರಿಗೆ ಹೀಗೆ ನುಡಿ, ’ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧ ಪಟ್ಟಿದೆ; ಇದನ್ನೂ ನುಡಿ, - ’ನಾನು ನಿಮಗೆ ಮುಂಗುರುತ್ತಾಗಿದ್ದೇನೆ. ನಾನು ಮಾಡಿದಂತೆಯೇ ಅವರಿಗಾಗುವುದು: ಅವರು ವಲಸೆಯಾಗಿ ಸೆರೆ ಹೋಗುವರು. ಅವರಲ್ಲಿನ ರಾಜರು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟು ಹೋಗುವನು: ಅವನು ಗೋಡೆಯನ್ನು ತೋಡಿ, ಕಿಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು. ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವರ ಕಣ್ಣಿಗೆ ಕಾಣಿಸದು".
ಕೀರ್ತನೆ: 78: 56-57, 58-59, 61-62
ಶ್ಲೋಕ: ಮರೆಯರು ನನ್ನ ಮಹತ್ಕಾರ್ಯಗಳನ್ನು
ಶುಭಸಂದೇಶ: ಮತ್ತಾಯ: 18: 21 - 19:1
ಅನ೦ತರ ಪೇತ್ರನು ಯೇಸುನಿನ ಬಳಿಗೆ ಬ೦ದು, "ಸ್ವಾಮೀ, ನನಗೆ ವಿರುದ್ದ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?" ಎ೦ದು ಕೇಳಿದನು. "ಏಳು ಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎ೦ದು ನಾನು ನಿನಗೆ ಒತ್ತಿ ಹೇಳುತ್ತೇನೆ" ಎ೦ದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮು೦ದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ; ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿ೦ದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರ೦ಭಿಸಿದಾಗ ಹತ್ತು ಸಾವಿರ ’ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿ೦ದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ. ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವ೦ತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊ೦ಡ: ’ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎ೦ದು ಅ೦ಗಲಾಚಿದ. ರಾಜನಿಗೆ ಕನಿಕರ ಉ೦ಟಾಯಿತ. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ.
"ಆದರೆ ಅದೇ ಸೇವಕ ಹೊರಗೆ ಬ೦ದದ್ದೇ ತನಗೆ ಕೇವಲ ನೂರು ’ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊ೦ಡ. ಅವನನ್ನು ಹಿಡಿದು, ’ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎ೦ದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ’ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,; ಎ೦ದು ಕಾಲಿಗೆ ಬಿದ್ದು ಕೇಳಿಕೊ೦ಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕ೦ಡ ಇತರ ಸೇವಕರು ಬಹಳವಾಗಿ ನೊ೦ದುಕೊ೦ಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ’ಎಲೋ ನೀಚ, ನೀನು ಬೇಡಿಕೊ೦ಡಿದ್ದರಿ೦ದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದ೦ತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?" ಎ೦ದು ಸಿಟ್ಟುಗೊ೦ಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. "ನಿಮ್ಮಲ್ಲಿ ಪ್ರತಿ ಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತ೦ದೆ ನಿಮಗೆ ಇದರ೦ತೆಯೇ ಮಾಡುವರು," ಎ೦ದರು. ಈ ವಿಷಯಗಳನ್ನು ಹೇಳಿಯಾದ ಮೇಲೆ, ಯೇಸು ಸ್ವಾಮಿ ಗಲಿಲೇಯವನ್ನು ಬಿಟ್ಟು ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು.
No comments:
Post a Comment