ಸಾಧಾರಣ ಕಾಲದ ಹತ್ತೊಂಭತ್ತನೆಯ ವಾರ - ಮಂಗಳವಾರ
ಮೊದಲನೇ ವಾಚನ: ಯೆಜೆಕಿಯೇಲ: 2:8 -3:4
"ನರಪುತನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿ ತೆರೆದು ತಿಂದುಬಿಡು," ಎಂದರು. ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. ಆ ಸುರುಳಿಯನ್ನು ನನ್ನೆದುರಿನಲ್ಲೇ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು. ಬಳಿಕ ಸರ್ವೇಶ್ವರ ನನಗೆ, "ನರಪುತ್ರನೆ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶವರಿಗೆ ಸಾರು, ಹೋಗು," ಎಂದು ಆಜ್ಞಾಪಿಸಿದರು. ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. ತಿನ್ನಿಸುತ್ತಾ, "ನರಪುತ್ರನೆ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ," ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: "ನರಪುತ್ರನೆ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಹೇಳು.
ಶ್ಲೋಕ: ನಿನ್ನ ನುಡಿ ಎನಿತೋ ರುಚಿ ನನ್ನ ನಾಲಿಗೆಗೆ.
ಶುಭಸಂದೇಶ: ಮತ್ತಾಯ: 18: 1-5, 10, 12-14
ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರ ಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ. ಎಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. "ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತ್ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತ್ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದ ಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದು ಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ".
No comments:
Post a Comment