ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಮಂಗಳವಾರ
ಮೊದಲನೇ ವಾಚನ: ಯೆಜೆಕಿಯೇಲ: 28:1-10
ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು - "ನರಪುತ್ರನೇ, ನೀನು ಟೈರ್ ನಗರದ ರಾಜನಿಗೆ ಹೀಗೆ ನುಡಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ಗರ್ವದಿಂದ ’ಆಹಾ, ನಾನೇ ದೇವರು, ಸಮುದ್ರ ಮಧ್ಯೆ ದೇವರ ಆಸನವನ್ನೇ ಅಲಂಕರಿಸಿದ್ದೇನೆ’, ಎಂದುಕೊಂಡೆ. ನಿನು ನಿನ್ನ ದೇವರಿಗೆ ಸಮನಾಗಿಸಿಕೊಂಡೆಯೋ? ನೀನು ಎಂದಿಗೂ ದೇವರಲ್ಲ, ನೀನೊಬ್ಬ ನರಪ್ರಾಣಿಯಷ್ಟೆ. ನೀನು ದಾನಿಯೇಲನಿಗಿಂತಲೂ ಬುದ್ದಿವಂತನೋ? ಹಾಗಾದರೆ ನಿನಗೆ ಮರೆಯಾದ ರಹಸ್ಯ ಯಾವುದೂ ಇಲ್ಲ! ನಿನ್ನ ಜ್ನಾನ ವಿವೇಕಿಗಳಿಂದ ಐಶ್ವರ್ಯವನ್ನುಗಳಿಸಿ, ನಿನ್ನ ಬೊಕ್ಕಸಗಳಲ್ಲಿ ಬೆಳ್ಳಿ ಬಂಗಾರವನ್ನು ತುಂಬಿಸಿಕೊಂಡಿರುವೆ. ನಿನ್ನ ಅಧಿಕ ಜ್ನಾನದಿಂದ ಹಾಗು ವ್ಯಾಪಾರದಿಂದ ಸಿರಿಸಂಪತ್ತನ್ನು ವೃದ್ದಿಮಾಡಿಕೊಂಡಿರುವೆ. ಆದುದರಿಂದ ನಿನ್ನ ಮನಸ್ಸು ನಿನ್ನ ಆಸ್ತಿಯ ನಿಮಿತ್ತ ಉಬ್ಬಿ ಹೋಗಿದೆ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನೀನು ನಿನ್ನನ್ನೇ ದೇವರಿಗೆ ಸಮನಾಗಿಸಿಕೊಂಡಿರುವೆ. ಆದುದರಿಂದ ನಾನು ಅತೀ ಭಯಂಕರ ಜನಾಂಗದವರಾದ ಮ್ಲೇಚ್ಚರನ್ನು ನಿನ್ನ ಮೇಲೆ ಬೀಳಮಾಡುವೆನು; ಅವರು ನಿನ್ನ ಜ್ನಾನದ ಸೊಬಗಿನ ಮೇಲೆ ಕತ್ತಿ ಹಿರಿದು, ನಿನ್ನ ಹೊಳಪನ್ನು ಹೊಲಸು ಮಾಡುವರು. ನಿನ್ನನ್ನು ಪಾತಾಳಕ್ಕೆ ತಳ್ಳಿ ಬಿಡುವರು. ಸಮುದ್ರ ಮಧ್ಯೆ ಹತರಾದವರ ಗತಿ ನಿನಗೆ ಸಂಭವಿಸುವುದು. ನಿನ್ನನ್ನು ಸಂಹರಿಸುವವನೆದುರಿಗೆ ನಿಂತು, ’ನಾನು ದೇವರು’ ಎಂದು ಹೇಳಬಲ್ಲೆಯ? ಹತಿಸುವವನ ಕೈಗೆ ನೀನು ಎಂದಿಗೂ ದೇವರಲ್ಲ. ನರಪ್ರಾಣಿಯೇ! ನೀನು ಅನ್ಯರ ಕೈಯಿಂದ ಸುನ್ನತಿ ಹೀನರ ಮರಣಕ್ಕೆ ಗುರಿಯಾಗುವೆ; ನಾನೇ ನುಡಿದಿದ್ದೇನೆ, ಇದು ಸರ್ವೇಶ್ವರನಾದ ದೇವರ ಸಂಕಲ್ಪ".
ಧ. ಕಾ.: 32: 26-27ಎಬಿ, 27ಸಿಡಿ - 28, 30, 35ಸಿಡಿ - 36ಎಬಿ
ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ.
ಶುಭಸಂದೇಶ: ಮತ್ತಾಯ: 19: 23-30
ಆಗ ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಐಶ್ವರ್ಯವಂತನು ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ" ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. "ಹಾಗಾದರೆ ಯಾರು ತಾನೇ ಜೀವೋದ್ದಾರ ಹೊಂದಲು ಸಾದ್ಯ?" ಎಂದುಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, "ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ," ಎಂದರು. ಪೇತ್ರನು ಹಾಗ ಮುಂದೆ ಬಂದು, "ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?" ಎಂದು ಕೇಳಿದನು. ಅದಕ್ಕೆ ಯೇಸು, "ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರ ಜೀವಕ್ಕೆ ಬಾಧ್ಯಸ್ತನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.
No comments:
Post a Comment