ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಗುರುವಾರ
ಮೊದಲನೇ ವಾಚನ: ಯೆಜೆಕಿಯೇಲ: 36: 23-28
ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು, ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ, ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ. ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
ಕೀರ್ತನೆ: 51: 12-13, 14-15, 18-19
ಶ್ಲೋಕ: ಹಿಸ್ಸೋಪಿನಿಂದ ನೀ ಚಿಮುಕಿಸೆ ನಾ ಶುದ್ಧನಾಗುವೆ.
ಶುಭಸಂದೇಶ: ಮತ್ತಾಯ: 22: 1-14
ಯೇಸುಸ್ವಾಮಿ ಮತ್ತೆ ಅವರೊಡನೆ ಸಮಾತಿಗಳಲ್ಲೇ ಮಾತನಾಡಿದರು: "ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. ಪುನಃ ಬೇರೆ ಸೇವಕರನ್ನು ಅಟ್ಟಿದ. ’ಔತನ ಸಿದ್ದವಾಗಿದೆ. ಕೊಬ್ಬಿನ ಮಾಂಸದ ಅಡುಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ;’ ಎಂದು ಅಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ. ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟು ಬಿಟ್ಟ ಇನ್ನೊಬ್ಬ ವ್ಯಪಾರಕ್ಕೆ ಹೊರಟು ಹೋದ, ಉಳಿದವರು ಕರೆಯಲು ಬಂದ ಆಳುಗಳನ್ನೇ ನಿಂದಿಸಿ ಬಡಿದು ಕೊಂದು ಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟು ಹಾಕಿಸಿದ. ಅನಂತರ ತನ್ನ ಸೇವಕರಿಗೆ, ’ವಿವಾಹ ಮಹೋತ್ಸವವೇನೋ ಸಿದ್ದವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲ ಉತ್ಸವಕ್ಕೆ ಕರೆಯಿರಿ’ ಎಂದ. ಅಂತೆಯೇ ಅವರು ಹೋಗಿ ಯೋಗ್ಯರು ಅಯೋಗ್ಯರೆನ್ನದೆ ಕಂಡವರನ್ನೆಲ್ಲ ಒಟ್ಟುಗೂಡಿಸಿ ಕರೆದು ತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. "ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. ’ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, ’ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ ಎಂದು ಹೇಳಿದ. "ಹೀಗೆ ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ." ಎಂದರು ಸ್ವಾಮಿ.
No comments:
Post a Comment