ಸಾಧಾರಣ ಕಾಲದ 21ನೇ - ಶುಕ್ರವಾರ
ಮೊದಲನೇ ವಾಚನ: 1 ಕೊರಿಂಥಿಯರಿಗೆ: 1: 17-25
ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೆ ಆದರೆ, ಕ್ರಿಸ್ತ ಯೇಸುವಿನ ಶಿಲುಬೆಯೇ ನಿರರ್ಥಕವಾದೀತು. ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚುಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ. "ಜ್ನಾನಿಗಳ ಜ್ನಾನವನ್ನು ನಾಶಮಾಡುವೆನು; ಜಾಣರ ಜಾಣತನಕ್ಕೆ ಭಂಗತರುವೆನು;" ಎಂದು ಪವಿತ್ರ ಗ್ರಂಥದಲ್ಲಿ ಇದೆಯಲ್ಲವೇ? ಹೀಗಿರುವಾಗ ಜ್ನಾನಿಯಲ್ಲಿ? ಶಾಸ್ತ್ರಜ್ನನೆಲ್ಲಿ? ಜಗತ್ತಿನ ತರ್ಕ ನಿಪುಣನೆಲ್ಲಿ? ಪ್ರಪಂಚದ ಜ್ನಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ? ಲೋಕವು ತನ್ನ ಸ್ವಂತ ಜ್ನಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ’ಹುಚ್ಚುತನ’ ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ದರಿಸುವುದು ದೇವರಿಗೆ ಉಚಿತವೆನಿಸಿತು. ಯೆಹೂದ್ಯರು ಸೂಚಕ ಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ನಾನವನ್ನು ಅರುಸುತ್ತಾರೆ. ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ. ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂತವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗು ದೇವರ ಜ್ನಾನವಾಗಿದ್ದಾರೆ. ’ದೇವರ ಹುಚ್ಚುತನ’ ಎಂಬುದು ಮಾನವನ ಜ್ನಾನಕಿಂತಲೂ ಶ್ರೇಷ್ಟವಾದುದು. ’ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.
ಕೀರ್ತನೆ: 33: 1, 2, 4, 5, 10, 11
ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು.
"ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತು ಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು. ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೆ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗೆ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೆ ನಿದ್ರೆ ಹೋದರು. "ನಡು ರಾತ್ರಿಯ ವೇಳೆ. ’ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, ’ನಮ್ಮ ದೀಪಗಳು ಆರಿ ಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು. ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು.’ ಎಂದರು. ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ದರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣ ಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು. ಉಳಿದ ಕನ್ಯೆಯರು ಅನಂತರ ಬಂದರು. ’ಸ್ವಾಮಿ, ಸ್ವಾಮಿ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು. ಅದಕ್ಕೆ ಉತ್ತರವಾಗಿ ಆ ಮದುವಣಿಗ, ’ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದು ಬಿಟ್ಟ. ಆದ್ದರಿಂದ ಜಾಗ್ರತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು.
No comments:
Post a Comment