ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಶನಿವಾರ
ಮೊದಲನೇ ವಾಚನ: ಯೆಜೆಕಿಯೇಲ: 43: 1-7
ಆಮೇಲೆ ಆ ಪುರುಷ ನನ್ನನ್ನು ಪೂರ್ವದ ಬಾಗಿಲಿಗೆ ಬರಮಾಡಿದನು. ಆಗ ಇಗೋ, ಇಸ್ರಯೇಲಿನ ದೇವರ ತೇಜಸ್ಸು ಪೂರ್ವ ಮಾರ್ಗವಾಗಿ ಬಂದಿತು. ಅವರ ಧ್ವನಿ ಜಲ ಪ್ರವಾಹದ ಘೋಷದಂತಿತ್ತು. ಅವರ ತೇಜಸ್ಸಿನಿಂದ ಭೂಮಿ ಬೆಳಗಿತು. ಮೊದಲು ನನಗೆ ಕಂಡು ಬಂದ ತೇಜಸ್ಸಿನಂತೆ ಅದು ಕಾಣಿಸಿತು. ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನೇ ಕಂಡೆನು. ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತ ದರ್ಶನದಂಥ ದರ್ಶನ ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆ. ಆಗ ಸರ್ವೇಶ್ವರನ ತೇಜಸ್ಸು ಪೂರ್ವ ಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು. ದೇವರಾತ್ಮ ನನ್ನನ್ನು ಎತ್ತಿ ಒಳಗಿನ ಪ್ರಾಕಾರಕ್ಕೆ ತಂದಿತು. ಆಗ ಏನಾಶ್ಚರ್ಯ! ಸರ್ವೇಶ್ವರನ ತೇಜಸ್ಸು ದೇವಸ್ಥಾನವನ್ನು ತೊಂಬಿಕೊಂಡಿತ್ತು. ದೇವಸ್ಥಾನದೊಳಗಿಂದ ನನ್ನನ್ನು ಸಂಬೋಧಿಸಿ ನುಡಿಯುವವನ ಶಬ್ಧ ನನ್ನ ಕಿವಿಗೆ ಬಿದ್ದಿತು; ಆ ಪುರುಷ ನನ್ನ ಪಕ್ಕದಲ್ಲೇ ನಿಂತಿದ್ದನು. ನುಡಿಯುವಾತನು ನನಗೆ ಹೀಗೆ ಹೇಳಿದನು: "ನರಪುತ್ರನೇ, ಇದು ನನ್ನ ಸಿಂಹಾಸನಸ್ಥಾನ, ನನ್ನ ಪಾದಸನ್ನಿಧಿ. ಇಲ್ಲಿ ನಾನು ಇಸ್ರಯೇಲರ ಮಧ್ಯೆ ಸದಾ ವಾಸಿಸುವೆನು."
ಕೀರ್ತನೆ: 85: 9ಎಬಿ, 10,11-12,13-14
ಶ್ಲೋಕ: ಪ್ರಭುವಿನ ಮಹಿಮೆ ನಾಡಿನಲ್ಲಿರುವುದು ನಿರುತ.
ಶುಭಸಂದೇಶ: ಮತ್ತಾಯ: 23:1-12
ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು: "ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮೊಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ ’ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು."
No comments:
Post a Comment