ಸಾಧಾರಣ ಕಾಲದ ಹತ್ತೊಂಭತ್ತನೆಯ ವಾರ - ಬುಧವಾರ
ಮೊದಲನೇ ವಾಚನ: ಪ್ರಕಟನೆ 11:19; 12:1-6,10
ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟ ಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲೇ ಕಾಯ್ದುಕೊಂಡಿತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳ ಬಲ್ಲಂಥ ಒಂದು ಗಂಡು ಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾ ಶಬ್ಧವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: "ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾದಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.
ಕೀರ್ತನೆ: 45: 10, 11, 12, 16.
ಶ್ಲೋಕ:
ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲಿ
ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ.
ಎರಡನೇ ವಾಚನ: 1 ಕೊರಿಂಥಿಯರಿಗೆ: 15: 20-27
ಕ್ರಿಸ್ತ ಯೇಸು ಪುನರುತ್ಥಾನ ಹೊಂದಿದ್ದೇನೋ
ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮ ಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತ ಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತ ಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲ ಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು. ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ. ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. "ದೇವರು ಎಲ್ಲವನ್ನೂ ಅಧೀನ ಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ," ಎಂದು ಲಿಖಿತವಾಗಿದೆ. "ಎಲ್ಲವನ್ನೂ ಅಧೀನಪಡಿಸಲಾಗಿದೆ," ಎಂದು ಹೇಳುವಾಗ, ಹಾಗೇ ಅಧೀನ ಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.
ಶುಭಸಂದೇಶ: ಲೂಕ: 1: 39-56
ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒ೦ದು ಊರಿಗೆ ತ್ವರೆಯಾಗಿ ಬ೦ದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವ೦ದಿಸಿದಳು. ಮರಿಯಳ ವ೦ದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿ೦ದ ಹೀಗೆ೦ದಳು: "ಸ್ತ್ರೀಯರರೆಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬ೦ದುದು ಅದೆ೦ಥ ಭಾಗ್ಯ! ನಿನ್ನ ವ೦ದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನ೦ದದಿ೦ದ, ನನ್ನ ಕರುಳ ಕುಡಿ! ನ೦ಬಿ ಧನ್ಯಳಾದೆ ನೀನು, ದೇವರಿ೦ದ ಬ೦ದ ವಾರ್ತೆ ನೆರವೇರಿಯೇ ತೀರುವುದೆ೦ದು." ಆಗ ಹೀಗೆ೦ದು ಮರಿಯಳು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ! ಉಲ್ಲಾಸಿಸುತ್ತದೆ ಮುಕ್ತಿದಾತ ದೇವನಲಿ! ತನ್ನ ದಾಸಿಯ ದೀನತೆಯನು ನೆನಪಿಗೆ ತ೦ದುಕೊ೦ಡನಾತ! ಧನ್ಯಳೆ೦ದು ಹೊಗಳುವರೆನ್ನನು ಇ೦ದಿನಿ೦ದ ಸರ್ವ ಜನಾ೦ಗ! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ! ಆತನಲ್ಲಿ ಭಯಭಕ್ತಿಯುಳ್ಳವರಿಗೆ! ಆತನ ಪ್ರೀತಿ ತಲತಲಾ೦ತರದವರೆಗೆ! ಗರ್ವಹೃದಯಿಗಳನಾತ ಚದರಿಸುವನು! ಪ್ರದರ್ಶಿಸಿರುವನು ತನ್ನ ಬಾಹುಬಲವನು! ಇಳಿಸಿಹನು ಗದ್ದುಗೆಯಿ೦ದ ಘನಾಧಿಪತಿಗಳನು! ಏರಿಸಿರುವನು ಉನ್ನತಿಗೆ ದೀನದಲಿತರನು! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ! ಹೊರದೂಡಿರುವನು ಸಿರಿವ೦ತರನು ಬರೀಗೈಯಲಿ! ನೆರವಾದನು ತನ್ನ ದಾಸ ಇಸ್ರಯೇಲನಿಗೆ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ! ಮರೆಯಲ್ಲಿ ಆತ ಕರುಣೆ ತೋರಲು ಅಬ್ರಹಾಮನಿಗೆ! ಆವನ ಸ೦ತತಿಗೆ, ಯುಗಯುಗಾ೦ತರದವರೆಗೆ! ಮರಿಯಳು ಸುಮಾರು ಮೂರು ತಿ೦ಗಳು ಎಲಿಜಬೇತಳೊಡನೆ ತ೦ಗಿದ್ದು ತನ್ನ ಮನೆಗೆ ಹಿ೦ದಿರುಗಿದಳು.



No comments:
Post a Comment