ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.08.2018

ಸಾಧಾರಣ ಕಾಲದ ಇಪ್ಪತ್ತನೆಯ ವಾರ - ಬುಧವಾರ

ಮೊದಲನೇ ವಾಚನ: ಯೆಜೆಕಿಯೇಲ: 34:1-11 (ಯೆಶಾಯ: 9: 1-6)

ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು. "ನರಪುತ್ರನೇ, ಇಸ್ರಯೇಲೆಂಬ ಮಂದೆಯ ಕುರುಬರಿಗೆ ವಿರುದ್ದ ಈ ದೈವೋಕ್ತಿಯನ್ನು ಪ್ರವಚನ ರೂಪವಾಗಿ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ ಸ್ವಂತ ಹೊಟ್ಟೆ ಹೊರೆದುಕೊಳ್ಳುವ ಇಸ್ರಯೇಲಿನ ಕುರುಬರಿಗೆ ಧಿಕಾರ! ಕುರಿಗಳ ಹೊಟ್ಟೆ ಗಮನಿಸುವುದು ಕುರುಬರ ಧರ್ಮವಲ್ಲವೆ? ನೀವು ಅವುಗಳ ಹಾಲನ್ನು ಕುಡಿಯುತ್ತೀರಿ, ಉಣ್ಣೆಯ ಹೊದಿಕೆಯನ್ನು ಹೊದಿಯುತ್ತೀರಿ; ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. ಹೌದು, ದುರ್ಬಲವಾದವುಗಳನ್ನು ನೀವು ಬಲಗೊಳಿಸಲಿಲ್ಲ. ರೋಗದವುಗಳನ್ನು ಸ್ವಸ್ಥ ಮಾಡಲಿಲ್ಲ, ಮುರಿದ ಅಂಗಗಳನ್ನು ಕಟ್ಟಲಿಲ್ಲ, ದಾರಿತಪ್ಪಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆ, ಬಲತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ. ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು; ನನ್ನ ಕುರಿಗಳು ಮಲೆನಾಡಿನಲ್ಲೆಲ್ಲಾ ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆ ಅಲೆದಾಡಿದವು; ಹೌದು, ನನ್ನ ಕುರಿಗಳು ಭೂಮಂಡಲದಲ್ಲೆಲ್ಲಾ ಚದರಿಹೋದವು; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ. "ಕುರುಬರೇ, ಸರ್ವೇಶ್ವರನ ಮಾತನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ. ಆದ ಕಾರಣ ಕುರುಬರೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಅಕಟಾ! ನನ್ನ ಜೀವದಾಣೆ, ನಾನು ಆ ಕುರಿಗಾಹಿಗಳಿಗೆ ವಿರುದ್ದನಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿ ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳರು; ನನ್ನ ಕುರಿಗಳು ಆಹಾರವಾಗಿ ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು. "ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು."

ಕೀರ್ತನೆ: 23:1-3ಎ, 3ಬಿ-4, 5, 65
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?

ಶುಭಸಂದೇಶ: ಮತ್ತಾಯ: 20: 1-16 (ಲೂಕ 1:26-38)

"ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿ ತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೊಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಿಗ್ಗೆ ಒಂಭತ್ತು ಗಂಟಗೆ ಅವನು ಪುನಃ ಸಂತೆ ಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತು ಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ’ನೀವು ನನ್ನ ದ್ರಾಕ್ಷಿ ತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ.’ ಎಂದ. ಅವರು ಹೋದರು. ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಳು ಬೇರೆ ಕೆಲಸದವರು ಅಲ್ಲಿ ನಿಂತಿರುವುದನ್ನು ಕಂಡು, ’ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲ, ಏಕೆ?’ ಎಂದು ಕೇಳಿದ. ಅದಕ್ಕೆ ಅವರು, ’ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ’ಹಾಗದರೆ ನೀವು ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ’ ಎಂದು ಹೇಳಿ ಅವರನ್ನೂ ಕಳುಹಿಸಿದ. "ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, ’ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಬಿಸಿ ಮೊದಲು ಬಂದವರ ತನಕ ಕೂಲಿ ಕೊಡು,’ ಎಂದ. ಅದರಂತೆ ಐದು ಗಂಟೆಗೆ ಗೊತ್ತು ಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿ ನಾಣ್ಯ ಸಿಕ್ಕಿತು. ಮೊತ್ತಮೊದಲು ಗೊತ್ತು ಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿ ನಾಣ್ಯ ದೊರಕಿತು. ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ದ ಗೊಣಗಲಾರಂಬಿಸಿದರು. ’ಕಡೇ ಒತ್ತಿನಲ್ಲಿ ಬಂದ ಇವರು ಒಂದೇಒಂದು ಗಂಟೆ ಕೆಲಸ ಮಾಡಿದ್ದಾರೆ; ಬಿಸಿಲಲ್ಲಿ ಬೆಂದು ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮ ಮಾಡಿದ್ಧಿರಲ್ಲಾ!’ ಎಂದರು. ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ’ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕ್ಕೊಂದು ಬೆಳ್ಳಿ ನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ? ನಿನ್ನ ಕೂಲಿಯೇನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕದೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನದ್ದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೇ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ. ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು," ಎಂದು ಯೇಸು ಬೋಧಿಸಿದರು.

No comments:

Post a Comment