ಮೊದಲನೇ ವಾಚನ: ಯೆರೆಮೀಯ 26:1-9
ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು: ನೀನು ನನ್ನ ದೇವಾಲಯದ ಪ್ರಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ. ಬಹುಶ: ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಟೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು. "ಅವರಿಗೆ ನೀನು ಹೇಳಬೇಕಾದುದು ಇದು: ಸರ್ವೇಶ್ವರ ಹೀಗೆನ್ನುತ್ತಾರೆ, ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆ ಹೋದರೆ, ಹಾಗೂ ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನು ಆಲಿಸದೆ ಹೋದರೆ, ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು". ಯೆರೇಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಆತನನ್ನು ಸುತ್ತುಗಟ್ಟಿದರು. "ನಿನಗೆ ಖಂಡಿತವಾಗಿ ಮರಣ ದಂಡನೆಯಾಗಬೇಕು. ನೀನು "ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನಪ್ರದೇಶವಾಗುವುದು," ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?" ಎಂದು ಕೂಗಾಡಿದರು, ಆಲಯದಲ್ಲಿದ್ದ ಯೆರೇಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.
ಕೀರ್ತನೆ: 69:5, 8-10, 14
ಶ್ಲೋಕ: ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ.
ಶುಭಸಂದೇಶ; ಮತ್ತಾಯ 13:54-58
ಯೇಸು ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಇದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, "ಈ ಪರಿಜ್ಞಾನ ಇವನಿಗೆಲ್ಲಿಂದ ಬಂತು? ಈ ಮಾಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ? ಇವನು ಆ ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಾಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ? ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು. ಅವರಿಗೆ ಯೇಸು "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು," ಎಂದು ಹೇಳಿದರು. ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.
No comments:
Post a Comment