ಸಾಧಾರಣ ಕಾಲದ 20ನೇ ಭಾನುವಾರ
ಮೊದಲನೆಯ ವಾಚನ
ಸ್ವತಃ ದೇವರೇ ಜ್ಞಾನವಾಗಿ ತಮ್ಮ ಭೋಜನಕ್ಕೆ ಆಹ್ವಾನಿಸುವಾಗ ದೀನರು ಮಾತ್ರ ಪ್ರತಿಕ್ರಿಯಿಸಿದ್ದಾರೆ. ಜ್ಞಾನವನ್ನು ಸವಿಯಲೊಲ್ಲದ
ಮೂಢರು ದೇವರ ಆಮಂತ್ರಣವನ್ನು ತಿರಸ್ಕರಿಸುತ್ತಿದ್ದಾರೆ. ವಿವೇಕ ಮಾರ್ಗವನ್ನು
ತ್ಯಜಿಸುತ್ತಿದ್ದಾರೆ, ಎನ್ನುತ್ತದೆ ಈ ವಾಚನ.
ಜ್ಞಾನೋಕ್ತಿಗಳ ಗ್ರಂಥದಿಂದ ವಾಚನ 9: 1-6
ಜ್ಞಾನವೆಂಬಾಕೆ ಮನೆಯನ್ನುಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ. ಪಶುಗಳನ್ನು
ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧ ಪಡಿಸುತ್ತಿದ್ದಾಳೆ. ನಗರದ ರಾಜಬೀದಿಗಳಿಗೆ
ತನ್ನ ದಾಸಿಯರನ್ನು ಕಳುಹಿಸುತ್ತಾಳೆ. “ಮುಗ್ಧ ಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ,” ಎಂದು ಪ್ರಕಟಿಸುತ್ತಾಳೆ. “ಬನ್ನಿ, ನಾ ಬಡಿಸುವ ಆಹಾರವನ್ನು
ಉಣಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಬನ್ನಿ. ಮೂಢರೇ,
ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕ ಮಾರ್ಗದಲ್ಲಿ
ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.
- ಪ್ರಭುವಿನ ವಾಕ್ಯ
ಎರಡನೆಯ ವಾಚನ
ನಡತೆಯ ವಿಷಯದಲ್ಲಿ ಜಾಗರೂಕತೆ, ಮೂಢತೆಯಲ್ಲಿ
ಜಾಣ್ಮೆ, ಬುದ್ದಿಹೀನತೆಯಲ್ಲಿ ಪ್ರಭುವಿನ ಚಿತ್ತ ಗ್ರಹಿಕೆ ಈ ವಾಚನದ ಅಂಶಗಳು.
ಇವುಗಳೊಂದಿಗೆ ದೇವರ ಸಂಕೀರ್ತನೆ
ಹಾಗು ಅವರ ಸ್ತುತಿ ಮಾಡಿದರೆ ನಮಗರಿವಿಲ್ಲದೆಯೇ ಭಕ್ತಿಯ ಉತ್ತುಂಗಕ್ಕೆ ಏರಿಸುತ್ತದೆ.
ಸಂತ ಪೌಲ ಎಫೆಸಿಯರಿಗೆ ಬರೆದ ಪತ್ರದಿಂದ ವಾಚನ 5: 15-21
ಸಹೋದರರೇ, ನಿಮ್ಮ ನಡತೆಯ ವಿಷಯದಲ್ಲಿ
ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ. ಈ ದಿನಗಳು
ಕೆಟ್ಟ ದಿನಗಳಾಗಿರುವುದರಿಂದ, ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ.
ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ. ಮದ್ಯಪಾನಮಾಡಿ ಮತ್ತರಾಗಬೇಡಿ.
ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮ ಭರಿತರಾಗಿರಿ. ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವಗಳನ್ನು ಪರಸ್ಪರ ವ್ಯಕ್ತಪಡಿಸಿರಿ.
ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸ್ತುತಿ ಸಲ್ಲಿಸಿರಿ. ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ
ಯಾವಾಗಲೂ ಎಲ್ಲ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಕ್ರಿಸ್ತ ಯೇಸುವಿನಲ್ಲಿ
ಭಯಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಿರಿ.
- ಪ್ರಭುವಿನ ವಾಕ್ಯ
ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ! ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ; ಈ ರೊಟ್ಟಿಯನ್ನು
ತಿಂದವನು ಚಿರಕಾಲ ಬಾಳುತ್ತಾನೆ. ಅಲ್ಲೆಲಯ!
ಶುಭಸಂದೇಶ
ಸಂತ ಯೊವಾನ್ನರು ಬರೆದ ಶುಭಸಂದೇಶದಿಂದ ವಾಚನ 6: 51-58
ಯೇಸುಸ್ವಾಮಿ ಜನಸಮೂಹಕ್ಕೆ ಹೀಗೆಂದರು: “ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ
ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ
ಮಾಂಸವೇ ನಾನು ಕೊಡುವ ರೊಟ್ಟಿ.” ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು
ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು
ಕೇಳತೊಡಗಿದರು. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ:
ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ
ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು
ಕುಡಿಯುವವನಲ್ಲಿ ನಿತ್ಯ ಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ.
ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು
ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು
ಅವನಲ್ಲಿ ನೆಲೆಸಿರುತ್ತೇನೆ. ಜೀವಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ
ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು
ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ,
ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು
ಹೇಳಿದರು.
- ಪ್ರಭುಕ್ರಿಸ್ತರ ಶುಭಸಂದೇಶ
Very blessed, God bless
ReplyDeleteThank you for your kind words.
ReplyDelete