ಮೊದಲನೇ ವಾಚನ: ಯೆರೆಮೀಯ 31:31-34
ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. ಈ ಒಡಂಬಡಿಕೆ ನಾನು ಅವರ ಪೂರ್ವಜರನ್ನು ಕೈ ಹಿಡಿದು ಈಜಿಪ್ಟಿನಿಂದ ಕರೆದು ತಂದಾಗ ಅವರೊಡನೆ ಮಾಡಿಕೊಂಡ ಒಡಬಂಡಿಕೆ ಅಂಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿ ನಡೆದರು. ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: "ಆ ದಿನಗಳು ಬಂದಮೇಲೆ ನಾನು ಇಸ್ರಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅಂತರಂಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ಒಬ್ಬನು ತನ್ನ ನೆರೆಹೊರೆರವರನ್ನು ಕುರಿತು ಅಥವಾ ಅಣ್ಣ ತಮ್ಮಂದಿರನ್ನು ಕುರಿತು, "ಸರ್ವೇಶ್ವರನನ್ನು ಅರಿತುಕೋ" ಎಂದ ಬೋಧಿಸಬೇಕಾಗಿರುವುದಿಲ್ಲ, ಚಿಕ್ಕವರಿಂದ ಮೊದಲ್ಗೊಂಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿ, ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ."
ಕೀರ್ತನೆ: 51:12-13, 14-15, 18-29
ಶ್ಲೋಕ ವಿಧೇಯನಾಗಿ ನಡೆದ ಸಿದ್ದಮನಸ್ಸನ್ನು ನೀಡು ಪ್ರಭು
ಶುಭಸಂದೇಶ: ಮತ್ತಾಯ 16:13-23
ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು. ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲಿಯನು" ಎನ್ನುತ್ತಾರೆ", "ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು." ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು. ಅದಕ್ಕೆ ಪ್ರತ್ಯತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವರ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿ ಬಿಚ್ಚಲಾಗುವುದು." ಆನಂತರ ಯೇಸು ತಮ್ಮ ಶಿಷ್ಯರಿಗೆ ತಾವು "ಅಭಿಷಿಕ್ತರಾದ ಲೋಕೋದ್ಧಾರಕ" ಎಂಬುದನ್ನು ಯಾರಿಗೂ ಹೇಳಕೂಡದುದೆಂದು ಕಟ್ಟಪ್ಪಣೆ ಮಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, " ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ." ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು
No comments:
Post a Comment