ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:11-26
"ಸೊಲೊಮೋನನ ಮಂಟಪದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಗುಣಹೊಂದಿದ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು. ಇದನ್ನು ನೋಡಿ ಪೇತ್ರನು ಇಂತೆಂದನು: "ಇಸ್ರಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವಂತ ಶಕ್ತಿಯಿಂದಾಗಲೀ ಭಕ್ತಿಯಿಂದಾಗಲೀ, ಈ ಮನುಷ್ಯನು ನಡೆಯುವಂತೆ ನಾವು ಮಾಡಿದೆವೆಂದು ಭಾವಿಸುತ್ತೀರೋ? ಪಿತಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅಂದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ಧಿಕ್ಕರಿಸಿದಿರಿ. ಯೇಸು ಪುನೀತರು ಹಾಗೂ ಸತ್ಯಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟುಕೊಡುವಂತೆ ಪಿಲಾತನನ್ನು ಬೇಡಿಕೊಂಡಿರಿ. ಜೀವದೊಡೆಯನನ್ನು ನೀವು ಕೊಂದುಹಾಕಿದಿರಿ; ದೇವರು ಅವರನ್ನು ಪುನರುತ್ದಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ, "ಸಹೋದರರೇ, ನೀವೂ ನಿಮ್ಮ ಅಧಿಕಾರಿಗಳೂ ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆಂದು ದೇವರು ಪ್ರವಾದಿಗಳೆಲ್ಲರ ಮುಖಾಂತರ ಆಗಲೇ ಮುಂತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಸರ್ವೇಶ್ವರನ ಸಾನ್ನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ಧಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನೂ ಪುನರ್ ಸ್ಥಾಪನೆಗೊಳಿಸುವವರೆಗೆ ಕ್ತಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ. "ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸಿದರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು ಆ ಪ್ರವಾದಿಗೆ ಕಿವಿಗೊಡದವನು ದೇವಜನರಿಂದ ದೂರವಾಗಿ ನಾಶವಾಗುತ್ತಾನೆ," ಎಂದು ಮೋಶೆ ಹೇಳಿದ್ದಾನೆ. ಸಮುವೇಲನೂ ಅವನ ನಂತರ ಬಂದ ಎಲ್ಲ ಪ್ರವಾದಿಗಳೂ ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವಚಿತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, "ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು" ಎಂದಿದ್ದಾರೆ ದೇವರು. ಅಂತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ ನಿಮ್ಮೆಲ್ಲರನ್ನು ದುಮಾರ್ಗದಿಂದ ದೂರಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ.
ಕೀರ್ತನೆ: 8:2, 5, 6-7, 8-9
ಶ್ಲೋಕ: ಪ್ರಭೂ, ಓ ನಮ್ಮ ಪ್ರಭೂ, ಎನಿತು ಮಹಿಮಾನ್ವಿತ ಹರಡಿದೆ ನಿನ್ನ ಸಿರಿನಾಮ ಜಗದಾದ್ಯಂತ
ಶುಭಸಂದೇಶ: ಲೂಕ 24:35-48
ಆಗ ಶಿಷ್ಯರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿ ಮಾಡಿದರು. ಅವರು ವರದಿ ಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, "ನಿಮಗೆ ಶಾಂತಿ", ಎಂದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು. ಆಗ ಯೇಸು, "ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ" ಎಂದರು. (ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು.) ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?" ಎಂದು ಕೇಳಿದರು. ಹುರಿದ ಮೀನಿನ ತುಂಡೊಂದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು," ಎಂದರು. ಆಮೇಲೆ, ಪವಿತ್ರಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು. ಅನಂತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿತ್ತು; ಅಲ್ಲದೆ ಜನರು ಪಾಪ ಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎಂದು ಹೇಳಿದರು
ಮನಸಿಗೊಂದಿಷ್ಟು : ಯೇಸು ಪುನರುತ್ಥಾನಗೊಂಡು ದರ್ಶನ ಕೊಟ್ಟಾಗ ಶಿಷ್ಯರು ಅವರನ್ನು ಭೂತವೆಂದು ಭಾವಿಸುತ್ತಾರೆ. ಆದರೆ ಯೇಸುವೇ ಅವರ ಬುದ್ದಿಯನ್ನು ವಿಕಾಸಗೊಳ್ಳುವಂತೆ ಮಾಡುತ್ತಾರೆ. ಮುಂದೆ ಇದೇ ಶಿಷ್ಯರು ಯೇಸುವನ್ನು ಇಡೀ ಜಗತ್ತಿಗೆ ಸಾರಿದ ರೀತಿ ಅದ್ಭುತ. ಈ ಅದ್ಭುತವು ನಮ್ಮಲ್ಲೂ ನೆರವೇರುವಂತೆ ನಮ್ಮ ಬುದ್ದಿಯನ್ನು ವಿಕಾಸಗೊಳಿಸುವಂತ ವರಕ್ಕಾಗಿ ಬೇಡಿಕೊಳ್ಳಬೇಕಾಗಿದೆ.
ಪ್ರಶ್ನೆ : ಸಾಕ್ಷಿಗಳಾಗಲು ನಾವು ಸಿದ್ಧರಾಗಿದ್ದೇವೆಯೇ?
ಮನಸಿಗೊಂದಿಷ್ಟು : ಯೇಸು ಪುನರುತ್ಥಾನಗೊಂಡು ದರ್ಶನ ಕೊಟ್ಟಾಗ ಶಿಷ್ಯರು ಅವರನ್ನು ಭೂತವೆಂದು ಭಾವಿಸುತ್ತಾರೆ. ಆದರೆ ಯೇಸುವೇ ಅವರ ಬುದ್ದಿಯನ್ನು ವಿಕಾಸಗೊಳ್ಳುವಂತೆ ಮಾಡುತ್ತಾರೆ. ಮುಂದೆ ಇದೇ ಶಿಷ್ಯರು ಯೇಸುವನ್ನು ಇಡೀ ಜಗತ್ತಿಗೆ ಸಾರಿದ ರೀತಿ ಅದ್ಭುತ. ಈ ಅದ್ಭುತವು ನಮ್ಮಲ್ಲೂ ನೆರವೇರುವಂತೆ ನಮ್ಮ ಬುದ್ದಿಯನ್ನು ವಿಕಾಸಗೊಳಿಸುವಂತ ವರಕ್ಕಾಗಿ ಬೇಡಿಕೊಳ್ಳಬೇಕಾಗಿದೆ.
ಪ್ರಶ್ನೆ : ಸಾಕ್ಷಿಗಳಾಗಲು ನಾವು ಸಿದ್ಧರಾಗಿದ್ದೇವೆಯೇ?
No comments:
Post a Comment