ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.04.2019 - 'ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,"

ಮೊದಲನೇ ವಾಚನ: ಯೆಶಾಯ 42:1-7

ಇಗೋ, ನನ್ನ ದಾಸನು! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು, ನನಗೆ ಪರಮ ಪ್ರಿಯನು, ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನ್ನು, ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದಂಟನು, ನಂದಿಸುವುದಿಲ್ಲ ಆತ ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ದರ್ಮವನು.ಎಡವಿ ಬೀಳನವನು, ಎದೆಗುಂದನವನು, ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದುದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು: ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನ್ನು, ಕರೆದಿಹೆನು ನನ್ನನ್ನು ಸದ್ಧರ್ಮ ಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನ್ನು ರಾಷ್ಪ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ, ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 27:1, 2, 3, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ

ಶುಭಸಂದೇಶ: ಯೊವಾನ್ನ 12:1-11


ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು.  ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಓರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು  ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, "ಈ ಸುಗಂಧ ತೈಲವನ್ನು ಮುನ್ನೂರು ದಿನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?" ಎಂದನು. ಬಡವರ ಹಿತ ಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ," ಎಂದರು. ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. ಲಾಸರನ ನಿಮಿತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮಖ್ಯ ಯಾಜಕರು ಆಲೋಚಿಸಿದರು.

No comments:

Post a Comment