ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:36-41
ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ದ್ವನಿಯಿಂದ ಹೀಗೆಂದು ಪ್ರಭೋಧಿಸಿದನು: "ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ." ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, "ಸಹೋದರರೇ, ಈಗ ನಾವು ಮಾಡಬೇಕಾದುದು ಏನು?" ಎಂದು ಕೇಳಿದರು. ಅದಕ್ಕೆ ಪೇತ್ರನು, "ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಿರಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರವಿರುವ ಎಲ್ಲರಿಗೂ ಮತ್ತು ಸವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ," ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. "ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ, " ಎಂದು ಎಚ್ಚರಿಸಿದನು. ಅವನ ಭೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.
ಕೀರ್ತನೆ: 33:4-5, 18-18, 20, 22
ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು
ಶುಭಸಂದೇಶ: ಯೊವಾನ್ನ 20:11-18
ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತ್ತಿದ್ದರು. ಅವರು ಅಕೆಯನ್ನು, "ಏಕಮ್ಮಾ ಅಳುತ್ತಿರುವೆ?" ಎಂದು ಕೇಳಿದರು. "ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಎಲ್ಲಿಟ್ಟಿದ್ದಾರೋ ತಿಳಿಯದು," ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಅಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, "ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?" ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, "ಅಯ್ಯಾ ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ," ಎಂದು ಹೇಳಿದಳು. ಆಗ ಯೇಸು, "ಮರಿಯಾ" ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, "ರಬ್ಬೂನಿ" ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ "ಗುರುದೇವಾ" ಎಂದರ್ಥ). ಯೇಸು ಆಕೆಗೆ, "ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆ ಎಂದು ತಿಳಿಸು," ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, "ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು." ಎಂದು ತಿಳಿಸಿದಳು.
ಮನಸಿಗೊಂದಿಷ್ಟು : "ನಾನು ಪ್ರಭುವನ್ನು ಕಂಡೆ" ಎಂಬ ಮರಿಯಳ ಆ ಮಾತು ನಮಗೆ ಸ್ಪೂರ್ತಿಯಾಗಬೇಕು. ಯೇಸುವೇ ಮುಂದೆ ನಿಂತಿದ್ದರೂ ಗುರುತಿಸದ ಮರಿಯಳು, ’ಮರಿಯಾ’ ಎಂಬ ಯೇಸುವಿನ ಒಂದೇ ಮಾತಿಗೆ ಕ್ಷಣ ಮಾತ್ರದಲ್ಲಿ ಗುರುತಿಸಿ, ನಂಬಿ, ಯೇಸುವಿನ ಪುನರುತ್ಥಾನದ ಮೊದಲ ಸಂದೇಶಕಿ ಆಗುತ್ತಾಳೆ. ಕ್ರಿಸ್ತನನ್ನು ಅರಿಯದಂತೆ, ಗುರುತಿಸಲಾಗದಂತ ಸಂದರ್ಭಗಳು ನಮಗೆ ಬರುತ್ತಲೇ ಇರುತ್ತವೆ. ಆದರೆ ಕ್ರಿಸ್ತನ ಮೆಲುದನಿ ನಮ್ಮನ್ನು ಕರೆಯುತ್ತಲೇ ಇರುತ್ತದೆ. ಕೇಳಬೇಕಷ್ಟೇ. ಕೇಳಿದ ತಕ್ಷಣ ನಮ್ಮ ಮನ ’ರಬ್ಬೂನಿ’ ಎನ್ನಬೇಕು. ’ಪ್ರಭುವನ್ನು ಕಂಡೆ’ ಎಂದು ಹೇಳುವ ಭಾಗ್ಯ ನಮ್ಮದಾಗಲಿ.
ಪ್ರಶ್ನೆ : ಕಣ್ಣ ಕಂಬನಿ ಮರಿಯಳಿಗೆ ಯೇಸುವನ್ನು ಗುರುತಿಸಲು ತೊಡಕಾಯಿತೇನೋ? ನಮಗಿರುವ ತೊಡಕುಗಳಾವುವು?

No comments:
Post a Comment