ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

14.04.2018 - 'ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ'

ಮೊದಲನೇ ವಾಚನ: ಯೆಶಾಯ 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮೀ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು, ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ, ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭಂಗಪಡಲಾರೆನಂದು ಗೊತ್ತು ನನಗೆ. 

ಕೀರ್ತನೆ: 22:8-9, 17-18, 19-20, 23-24

ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು, ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲ್ಲಿ ಕಾಣಿಸಿಕೊಂಡು, ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು, ವಿಧೇಯನಾಗಿ ನಡೆದುಕೊಂಡು, ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು, ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂಮಿವಾಸಿಗಳು, ಪಾತಾಳ ಜೀವರಾಶಿಗಳು. "ಕ್ರಿಸ್ತ ಯೇಸುವೇ ಪ್ರಭು" ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಲೂಕ 22:14-23:56

ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು. ಆಗ ಅವರು ಶಿಷ್ಯರಿಗೆ, ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೇನೆ. ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣ ಅರ್ಥವನ್ನು ಪಡೆಯುವ ತನಕ ನಾನಿದನ್ನು ಇನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎಂದರು. ಆನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, "ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ; ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,"ಎಂದರು. ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ," ಎಂದರು. ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು "ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ". "ಆದರೆ ಇಗೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. ನರಪುತ್ರನೇನೋ ದೈವೇಚ್ಛೆಯ ಪ್ರಕಾರ ಹೊರಟು ಹೋಗುತ್ತಾನೆ; ಆದರೆ ಆತನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!"ಎಂದರು.

ಇದನ್ನು ಕೇಳಿದ ಶಿಷ್ಯರು ಇಂತಹ ದುಷ್ಕ್ರತ್ಯ ಮಾಡುವವನು ತಮ್ಮಲ್ಲಿ ಯಾರಿರಬಹುದೆಂದು ಒಬ್ಬರನ್ನೊಬ್ಬರು ವಿಚಾರಿಸತೊಡಗಿದರು. ತಮ್ಮಲ್ಲಿ ಅತಿ ಶ್ರೇಷ್ಠನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು. ಆಗ ಯೇಸುಸ್ವಾಮಿ, "ಲೌಕಿಕ ಜನರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು. ಈ ಇಬ್ಬರಲ್ಲಿ ದೊಡ್ಡವನು ಯಾರು - ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟಮಾಡುವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ. ನನ್ನ ಶೋಧನೆ - ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು. ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನು ನಿಮಗೆ ವಹಿಸುತ್ತೇನೆ. ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ಸಿಮೋನನೇ, ಸಿಮೋನನೇ,  ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋದಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ. ಆದರೆ, ನಾನು ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು," ಎಂದರು. ಅದಕ್ಕೆ ಪೇತ್ರನು, "ಗುರುದೇವಾ, ನಿಮ್ಮ ಸಂಗಡ ಸೆರೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ದನಿದ್ದೇನೆ," ಎಂದನು. ಆಗ ಯೇಸು, "ಪೇತ್ರನೇ, ಇಂದು ಕೋಳಿಕೂಗುವ ಮೊದಲೇ ನನ್ನನ್ನು ಅರಿಯೆನೆಂದು ನೀನು ಮೂರು ಬಾರಿ ಬೊಂಕುವೆ, ಇದು ಖಂಡಿತ," ಎಂದರು. ಬಳಿಕ ಯೇಸುಸ್ವಾಮಿ, "ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯಿತೆ?" ಎಂದು ಶಿಷ್ಯರನ್ನು ಕೇಳಿದರು.  ಅದಕ್ಕೆ ಅವರು "ಇಲ್ಲ" ಎಂದು ಉತ್ತರ ಕೊಟ್ಟರು. "ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆಯಿರುವವನು ಹಾಗೆಯೇ ಮಾಡಲಿ; ಮತ್ತು ಕತ್ತಿಯಿಲ್ಲದವನು  ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ. ಏಕೆಂದರೆ, "ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು, ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ," ಎಂದರು. "ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ," ಎಂದು ಶಿಷ್ಯರು ಹೇಳಲು ಯೇಸು, "ಅಷ್ಟುಸಾಕು" ಎಂದರು.

ಮನಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ.

ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯ ಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು ಗೌರವವನ್ನು ಯೇಸುವಿಗೆ ನೀಡುತ್ತಾರೆ. ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ.

ಅಂದಿನ ಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತೆಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ  ನಿರೀಕ್ಷೆಗೆ ಪೆಟ್ಟು ಬಿತ್ತು.

ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ? ರಾಜನಂತೆ ಪ್ರವೇಶಿಸಿ, ತಮ್ಮ ಇಚ್ಛೆಯಂತೆ ಸಾಮಾನ್ಯ ಅಪರಾಧಿಯಾಗಿ ಶಿಲುಬೆಯಲ್ಲಿ ಪ್ರಾಣ ಬಿಟ್ಟ ಯೇಸು ಕೊನೆಗೆ ಮರಣ ಜಯಿಸಿ ಜಯಶೀಲರಾದರು. ಪವಿತ್ರ ವಾರದ ತಿರುಳಿರುವುದೇ ಯೇಸುವಿನ ಈ ಜಯದಲ್ಲಿ. ಯೇಸುವಿನ ಆ ಜಯ ನಮ್ಮದಾಗಬೇಕಾದರೆ, ನಾವು ಶಿಲುಬೆಯಿಂದ ವಿಮುಖರಾಗುವಂತಿಲ್ಲ ಪರರ ನೋವಿಗೆ ಸ್ಪಂದಿಸುವ, ಕಾರ್ಯಮುಖರಾಗುವ ಕ್ರಿಯೆಯೂ ಅಂತಹ ಒಂದು ಶಿಲುಬೆ.

ಜಿ.ಕೆ. ಚೆಸ್ಟರ‍್ಟನ್ ಎಂಬ ಲೇಖಕರ ಕವಿತೆಯೊಂದರಲ್ಲಿ ಕತ್ತೆಯೊಂದರ ಸ್ವಗತವಿದೆ. ತನ್ನ ಹೀನ ಬದುಕಿನ ಬಗ್ಗೆ ದು:ಖದಿಂದ ಮಾತಾಡುತ್ತಾ, ಕೊನೆಯಲ್ಲಿ ತನಗೂ ಒಂದು ಒಳ್ಳೆಯ ದಿನ ಬಂದಿತ್ತು, ಆ ದಿನದಂದು ಮೇರು ವ್ಯಕ್ತಿತ್ವದಿಂದಾಗಿ ತನಗೂ ಗರಿಗಳ, ಜಯಘೋಷದ ಸ್ವಾಗತ ಸಿಕ್ಕಿತ್ತು ಎಂಬ ಯೇಸುವಿನ ಜೆರುಸಲೇಮ್ ಪ್ರವೇಶದ ಉಲ್ಲೇಖದೊಂದಿಗೆ ಆ ಕತ್ತೆ ತನ್ನ ನೋವನ್ನು ಮರೆಯುತ್ತದೆ. ನೊಂದ-ಬೆಂದ, ಅನ್ಯಾಯಕ್ಕೊಳ್ಳಗಾಗಿ ನರಳುತ್ತಿರುವ ಜನರಿಗೆ ಆ ಕತ್ತೆಯ ಸ್ವಗತ ಸ್ಪೂರ್ತಿಯಾಗಲಿ. 

ಯೇಸುವನ್ನು ನಮ್ಮ ಮನದಲ್ಲಿ ಹೊತ್ತು ನಡೆದರೆ, ಒಳ್ಳೆಯ ದಿನಗಳು ಮತ್ತೆ ಬಂದೇ ಬರುತ್ತದೆ ಎಂಬ ಭರವಸೆಯೇ ಆ ಸ್ಪೂರ್ತಿ.

No comments:

Post a Comment