02.04.2019 - "ನಿನಗೆ ಗುಣ ಹೊಂದಲು ಮನಸ್ಸಿದೆಯೇ?"

 ಮೊದಲನೇ ವಾಚನ: ಯೆಜೆಕಿಯೇಲ 47:1-9, 12

 ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ಮೀಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. ಅವನು ಪುನಃ ಐನೂರು ಮೀಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ಮೀಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ಮೀಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊಂದರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು; ಆಗ ಅವನು ನನಗೆ, "ನರಪುತ್ರನೇ, ಇದನ್ನು ನೋಡಿದೆಯಾ?" ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು. ಆಗ ಅವನು ನನಗೆ ಹೀಗೆ ಹೇಳಿದನು: "ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು: ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ  ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲಜಂತು ಬದುಕಿ ಬಾಳುವುವು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲ್ಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷದಕ್ಕೂ ಅನುಕೂಲಿಸುವುವು. 

ಕೀರ್ತನೆ: 46:2-3, 5-6, 8-9 

ಶ್ಲೋಕ: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು, ಯಕೋಬ ಕುಲದೇವರು ನಮಗಾಶ್ರಯ ದುರ್ಗವು 

ಶುಭಸಂದೇಶ: ಯೊವಾನ್ನ 5:1-16 

ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲ, 'ಕುರಿಬಾಗಿಲು' ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ "ಬೆತ್ಸಥ" ಎಂದು ಕರೆಯುತ್ತಾರೆ. ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪದಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, "ನಿನಗೆ ಗುಣಹೊಂದಲು ಮನಸ್ಸಿದೆಯೇ?" ಎಂದು ಕೇಳಿದರು. "ಸ್ವಾಮೀ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲಿ ಬೇರೆ ಯಾರಾದರೂ ಇಳಿದು ಬಿಡುತ್ತಾರೆ," ಎಂದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, "ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ," ಎಂದರು. ಆ ಕ್ಷಣವೇ ಅವನು ಗುಣಹೊಂದಿ ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, "ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ದ," ಎಂದು ಹೇಳಿದರು. ಅದಕ್ಕೆ ಅವನು: "ನನ್ನನ್ನು ಗುಣಪಡಿಸಿದವರೇ, "ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ ಎಂದು ಹೇಳಿದರು," ಎಂದು ಉತ್ತರಕೊಟ್ಟನು. ಅಧಿಕಾರಿಗಳು, "ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?" ಎಂದು ಪ್ರಶ್ನಿಸಿದರು. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು. ಆನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, "ನೋಡು ನೀನು ಗುಣಹೊಂದಿರುವೆ: ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು" ಎಂದರು. ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, "ನನ್ನನ್ನು ಗುಣಪಡಿಸಿದವನು ಯೇಸುವೇ," ಎಂದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳ ಕೊಡಲು ತೊಡಗಿದರು.

ಮನಸಿಗೊಂದಿಷ್ಟು  :  ಲೋಕದಲ್ಲಿ, ನಮ್ಮ ಬಾಳಿನಲ್ಲಿ ನಮ್ಮನ್ನು ಸೋಲಿನೆಡೆಗೆ, ನಿರಾಸೆಯೆಡೆಗೆ ತಳ್ಳುವ ಸಂಗತಿಗಳು ಎದುರಾಗತ್ತಲೇ ಇರುತ್ತವೆ. ವರ್ಷಗಳಿಂದ ಕಾಡುವ ನೋವುಗಳಿರುತ್ತವೆ. "ಗುಣ ಹೊಂದಲು ಮನಸಿದೆಯೇ" ಎಂಬ ಯೇಸುವಿನ ಪ್ರಶ್ನೆ ಒಂದಲ್ಲ ಒಂದು ದಿನ ನಮಗೆ ಎದುರಾಗುತ್ತದೆ.  ಆ ದಿನಕ್ಕೆ ಕಾಯೋಣ. ನಮ್ಮೆಲ್ಲ ನಿರಾಸೆ, ಸೋಲನ್ನು ಸುತ್ತಿ ಎದ್ದು ನಡೆಯೋಣ.

ಪ್ರಶ್ನೆ : "ನಿನಗೆ ಗುಣಹೊಂದಲು ಮನಸ್ಸಿದೆಯೇ?"  

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...