ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:1-10
ಕೀರ್ತನೆ: 105:1-2, 3-4, 6-7, 8-9,
ಶ್ಲೋಕ: ಹೆಮ್ಮೆಪಡಿ, ನೆನೆದಾತನ ಶ್ರೀನಾಮ ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ
ಶುಭಸಂದೇಶ: ಲೂಕ 24:13-35
ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ, ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು. "ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ ಏನು ವಿಷಯ?" ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, "ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನ್ನೊಬ್ಬನಿಗೇ ಅವು ತಿಳಿಯದೆ?" ಎಂದನು. "ಏನು ನಡೆಯಿತು?" ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, "ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳಾಗಿವೆ. ಆದರೂ ನಮ್ಮಲ್ಲಿ ಕೆಲವು ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, "ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,' ಎಂದು ಹೇಳಿ ನಮ್ಮನ್ನು ದಿಗ್ಬ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಒಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ," ಎಂದರು. ಆಗ ಯೇಸು, "ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ಧಿಯನ್ನು ಪಡೆಯಬೇಕಾಗಿತ್ತಲ್ಲವೇ?" ಎಂದರು. ಆನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, "ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ," ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಿತ್ತಲ್ಲವೇ? ಎಂದುಕೊಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. "ಪ್ರಭು ಜೀವಂತರಾಗಿ ಎದ್ದಿರುವುದು ನಿಜ! ಅವರು ಸಿಮೋನನಿಗೆ ಕಾಣಿಸಿಕೊಂಡರು," ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿ ಮಾಡಿದರು.
ಮನಸಿಗೊಂದಿಷ್ಟು :
ಬೈಬಲಿನ ಮನತಟ್ಟುವ ಘಟನೆಯಲ್ಲಿ ಇದೂ ಒಂದು. ನಮಗಿರುವ ಸಂದೇಶ
-ನಮ್ಮ ಜೊತೆ ಯೇಸು ಹೆಜ್ಜೆಯಂತೂ ಹಾಕುವರು, ಆದರೆ ನಮ್ಮಲ್ಲಿ ತಂಗಲು ನಾವು ಆಹ್ವಾನ ಕೊಡಲೇ ಬೇಕು
- ಕೂಡಲೇ ಮತ್ತೆ ಜೆರುಸಲೇಮಿಗೆ ಹೋಗಿ ಯೇಸುವಿನ ದರ್ಶನದ ಸುದ್ದಿಯನ್ನು ತಡ ಮಾಡದೆ ಇತರ ಶಿಷ್ಯರಿಗೆ ಹೇಳುವ ಆನಂದದ ತವಕ ಆ ಶಿಷ್ಯರದು. ಯೇಸುವಿನಿಂದ ಪಡೆದದ್ದನ್ನು ಹಂಚುವಲ್ಲಿ ನಮ್ಮಲ್ಲೂ ಅದೇ ತವಕ, ಆತುರವಿರಬೇಕು
-ತಮ್ಮನ್ನು ನಿರಾಕರಿಸಿದ ಪೇತ್ರನಿಗೆ ಮೊದಲು ದರ್ಶನ ನೀಡುತ್ತಾರೆ. ಯೇಸು ನಮ್ಮ ಬಲಹೀನತೆಗಳೊಂದಿಗೆ ನಮ್ಮನ್ನು ಪ್ರೀತಿಸುತ್ತಾರೆ.
------------------------------------------------------------------------------
ಶಿಷ್ಯರ ಜೊತೆಗೆ ಎಮ್ಮಾವಿನ ಕಡೆಗೆ
ನಡೆದರು ಯೇಸು ಕೊನೆಯವರೆಗೆ
ರಾತ್ರಿಯ ಕಳೆದು ರೊಟ್ಟಿಯ ಮುರಿದು
ಧೈರ್ಯವ ಕೊಟ್ಟರು ಪ್ರೀತಿಯ ತೋರಿ
ಬರದೇ ಹೋಗುವರೇ ಬಾಳಿನ ಪಯಣದಲ್ಲಿ
ಉಳಿಯದೆ ಹೋಗುವರೇ ಬದುಕಿನ ಇರುಳಿನಲ್ಲಿ
ನಮ್ಮಯ ಯೇಸುಪ್ರಭು
ಜೊತೆ ಹೆಜ್ಜೆಯ ಹಾಕುವರು
ಪ್ರಶ್ನೆ : ನಮ್ಮ ಪಯಣದಲ್ಲಿ ಯೇಸುವಿಗೆ ಆಹ್ವಾನವಿದೆಯೇ?
No comments:
Post a Comment