21.04.2019 - ಪಾಸ್ಖ ಹಬ್ಬದ ಭಾನುವಾರ - ಹರ್ಷಿಸಿ ಆನಂದಿಸೋಣ ಇಂದು

ಪಾಸ್ಖ ಹಬ್ಬದ ಭಾನುವಾರ




ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:34, 37-43

ಪ್ರೇತ್ರನು ಹೀಗೆಂದು ಉಪದೇಶ ಮಾಡಿದನು: ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು. ಇವು ನಸರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು, ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು. ಅವರು ಯೆಹೂದ್ಯರ ಹಳ್ಳಿ ಹಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆ ಮರಕ್ಕೆ ನೇತುಹಾಕಿ ಕೊಂದರು. ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ದಾನಗೊಳಿಸಿ ಪ್ರತ್ಯೆಕ್ಷರಾಗುವಂತೆ ಮಾಡಿದರು. ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ, ಅವರು ಪುನರುತ್ದಾನ ಹೊಂದಿದ ನಂತರ ಅವರೊಡನೆಯೇ ಊಟ ಮಾಡಿದವರು ನಾವು. ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೆ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ಧಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ. ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆ ಮಾಡಿದ್ದಾರೆ."

ಕೀರ್ತನೆ: 118:1-2, 16-17, 22-23

ಶ್ಲೋಕ: ಪ್ರಭುವೇ, ನಿಯೋಜಿಸಿದ ದಿನವಿದು ಹರ್ಷಿಸಿ ಆನಂದಿಸೋಣ ಇಂದು

ಎರಡನೇ ವಾಚನ: ಕೊಲೊಸ್ಸೆಯರಿಗೆ 3:1-4

ಸಹೋದರರೇ, ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ದಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತಯೇಸುವೇ ನಿಮ್ಮ ನೈಜ್ಯ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ.

ಶುಭಸಂದೇಶ: ಯೊವಾನ್ನ 20:1-9

ಅಂದು ಭಾನುವಾರ,  ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು. ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, "ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ," ಎಂದು ಹೇಳಿದಳು. ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು. ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು. ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ  ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು. ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ನುಗ್ಗಿ ನೋಡಿದನು; ನೋಡಿ ನಂಬಿದನು. ಯೇಸು ಸತ್ತ ಮೇಲೆ ಪವಿತ್ರಗ್ರಂಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...