ಮೊದಲನೇ ವಾಚನ: 2 ಯೊಹಾನ್ನ 1:4-9
ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ. ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ. ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತಮೊದಲಿನಿಂದಲೂ ಕೇಳಿರುವ ಆಜ್ಞೆ. ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು. ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು. ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು; ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು. “ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! “ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. (ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು ಮತ್ತೊಬ್ಬನನ್ನು ಬಿಡಲಾಗುವುದು)” ಎಂದರು. “ಸ್ವಾಮೀ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.
No comments:
Post a Comment