ಮೊದಲನೇ ವಾಚನ: ಪ್ರಕಟಣಾ ಗ್ರಂಥ 3:1-6, 14-22
“ಸಾರ್ದಿಸ್‍ನಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ: ದೇವರ ಸಪ್ತ ಆತ್ಮಗಳನ್ನೂ ಸಪ್ತ ನಕ್ಷತ್ರಗಳನ್ನೂ ಹೊಂದಿರುವಾತನು ನೀಡುವ ಸಂದೇಶವಿದು: ನಿನ್ನ ಕೃತ್ಯಗಳನ್ನು ನೀನು ಬಲ್ಲೆ. ಹೆಸರಿಗೆ ಮಾತ್ರ ನೀನು ಜೀವಂತನಾಗಿರುವೆ. ಆದರೆ ವಾಸ್ತವವಾಗಿ ನೀನು ಸತ್ತಂತೆಯೇ ಸರಿ. ಎಚ್ಚೆತ್ತು ನಿನ್ನಲ್ಲಿ ಉಳಿದಿರುವುಗಳನ್ನು ಉತ್ತೇಜನಗೊಳಿಸು; ಅವು ಸಾವಿನ ದವಡೆಯಲ್ಲಿವೆ. ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಕೃತ್ಯಗಳು ಯಾವುವೂ ಸಮಗ್ರವಾಗಿರುವುದು ನನಗೆ ಕಂಡುಬಂದಿಲ್ಲ. ನಿನಗೆ ಕೊಡಲಾದ ಬೋಧನೆಯನ್ನೂ ಅದನ್ನು ನೀನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೋ. ಅದರಂತೆ ನಡೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗು. ನೀನು ಎಚ್ಚೆತ್ತುಕೊಳ್ಳದಿದ್ದರೆ ನಾನು ಕಳ್ಳನು ಬರುವಂತೆ ಬರುತ್ತೇನೆ. ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧಾಳಿಮಾಡುತ್ತೇನೆಂದೇ ನಿನಗೆ ತಿಳಿಯದು. ಆದರೂ ತಮ್ಮ ಉಡುಪನ್ನು ಮಲಿನಮಾಡಿಕೊಳ್ಳದ ಕೆಲವರು ಸಾರ್ದಿಸಿನಲ್ಲಿ ಇದ್ದಾರೆ. ಅಂಥವರು ಯೋಗ್ಯರಾಗಿರುವುದರಿಂದ ಶ್ವೇತಾಂಬರರಾಗಿ ನನ್ನೊಡನೆ ನಡೆದಾಡುವರು. ಜಯಹೊಂದುವವನು ಹೀಗೆ ಶ್ವೇತಾಂಬರನಾಗುವನು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಹಾಕುವುದಿಲ್ಲ. ನನ್ನ ಪಿತನ ಸಾನ್ನಿಧ್ಯದಲ್ಲಿಯೂ ಅವರ ದೂತರ ಮುಂದೆಯೂ ಅವನು ನನ್ನವನೆಂದು ನಾನು ಒಪ್ಪಿಕೊಳ್ಳುತ್ತೇನೆ. “ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.” “ಲವೊದಿಕೀಯದಲ್ಲಿರುವ ಶ್ರೀಸಭೆಯ ದೂತನಿಗೆ ಹೀಗೆ ಬರೆ : ವಿಶ್ವಾಸಪಾತ್ರನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಮೂಲಾಧಾರನೂ ಆದ ‘ಆಮೆನ್’ ಎಂಬಾತನು ನೀಡುವ ಸಂದೇಶವಿದು : ನಿನ್ನ ಕೃತ್ಯಗಳನ್ನು ನಾನು ಬಲ್ಲೆ. ನೀನು ತಣ್ಣಗೂ ಇಲ್ಲ, ಬಿಸಿಯಾಗೂ ಇಲ್ಲ. ನೀನು ತಣ್ಣಗಾಗಲಿ, ಬಿಸಿಯಾಗಲಿ ಇದ್ದಿದ್ದರೆ ಚೆನ್ನಾಗಿತ್ತು. ನೀನು ತಣ್ಣಗೂ ಇಲ್ಲದೆ ಬಿಸಿಯಾಗೂ ಇಲ್ಲದೆ ಉಗುರು ಬೆಚ್ಚಗೆ ಇರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಕ್ಕುತ್ತೇನೆ. ನೀನು ನಿನ್ನ ವಿಷಯವಾಗಿ, ‘ನಾನು ಐಶ್ವರ್ಯವಂತನು, ಸಿರಿಸಂಪತ್ತುಳ್ಳವನು, ಯಾವ ಕೊರತೆಯೂ ಇಲ್ಲದವನು’ ಎಂದು ಹೇಳಿಕೊಳ್ಳುತ್ತಿರುವೆ. ಆದರೆ ನೀನು ನಿರ್ಭಾಗ್ಯನು, ದುರವಸ್ಥೆಯಲ್ಲಿರುವವನು, ದರಿದ್ರನು, ಕುರುಡನು ಮತ್ತು ಬಟ್ಟೆಬರೆಯಿಲ್ಲದೆ ಬೆತ್ತಲೆಯಾಗಿರುವವನು ಎಂಬುದು ನಿನಗೆ ತಿಳಿಯದು. ಈಗ ನನ್ನ ಬುದ್ಧಿಮಾತುಗಳನ್ನು ಕೇಳು. ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಲ್ಲಿ ಪುಟವಿಟ್ಟ ಚಿನ್ನವನ್ನು ನನ್ನಿಂದ ಕೊಂಡುಕೋ. ಲಜ್ಜಾಸ್ಪದವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಶ್ವೇತವಸ್ತ್ರಗಳನ್ನು ನನ್ನಿಂದ ಕ್ರಯಕ್ಕೆ ಕೊಂಡುಕೊಂಡು ಅವುಗಳನ್ನು ಧರಿಸಿಕೋ. ನಿನಗೆ ಕಣ್ಣು ಕಾಣಿಸುವಂತೆ ಲೇಪನವನ್ನು ನನ್ನಿಂದ ಬೆಲೆಗೆ ತೆಗೆದುಕೊಂಡು ನಿನ್ನ ಕಣ್ಣುಗಳಿಗೆ ಹಚ್ಚಿಕೋ. ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು. ಇಗೋ, ಬಾಗಿಲ ಬಳಿ ನಿಂತು ತಟ್ಟುತ್ತಾ ಇದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿಸಿಕೊಂಡು ಬಾಗಿಲನ್ನು ತೆರೆದರೆ ನಾನು ಮನೆಯೊಳಗೆ ಪ್ರವೇಶಿಸುತ್ತೇನೆ. ಅವನ ಸಂಗಡ ಊಟಮಾಡುತ್ತೇನೆ ಮತ್ತು ಅವನೂ ನನ್ನ ಸಂಗಡ ಊಟಮಾಡುತ್ತಾನೆ. ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.
“ಸಭೆಗಳಿಗೆ ದೇವರಾತ್ಮ ಹೇಳುವುದನ್ನು ಕಿವಿಯುಳ್ಳವನು ಕೇಳಲಿ!”
ಕೀರ್ತನೆ: 15:2-3, 3-4, 5
ಶ್ಲೋಕ: ಜಯಹೊಂದಿದವನಿಗೆ ನನ್ನೊಡನೆ ಸಿಂಹಾಸದಲ್ಲಿ, ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ.
ಶುಭಸಂದೇಶ: ಲೂಕ 19:1-10
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದುಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, “ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,” ಎಂದರು. ಜಕ್ಕಾಯನು ತಕ್ಷಣವೇ ಇಳಿದುಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, “ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?” ಎಂದು ಗೊಣಗುಟ್ಟಿದರು.
ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, “ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು. ಆಗ ಯೇಸು, “ಇಂದು, ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ,” ಎಂದು ಹೇಳಿದರು.
No comments:
Post a Comment