ಮೊದಲನೆಯ ವಾಚನ: ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ವಾಚನ 3:17--4:1
ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. ಕ್ರಿಸ್ತ ಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಆನೇಕರಿದ್ದಾರೆ. ಇದನ್ಯು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು. ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದುವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.
ಕೀರ್ತನೆ 122:1-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ|
ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ|
ಆಯಿತೆನಗೆ ಆನಂದ ಜನರೆನ್ನ ಕರೆದಾಗ||
ನಮ್ಮ ಕಾಲುಗಳು ಓ ಜೆರುಸಲೇಮೇ|
ತಲುಪಿವೆ ನಿನ್ನ ಪುರದ್ವಾರಗಳನೇ||
ನೋಡು ಜೆರುಸಲೇಮ್ ಪಟ್ಟಣವಿದು|
ಗಟ್ಟಿಯಾಗಿಯೇ ಕಟ್ಟಲ್ಪಟ್ಟಿಹುದು|
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ||
ಮಾಡುವರಿಲ್ಲಿಯೇ ಪ್ರಭುವಿನ ನಾಮ ಕೀರ್ತನೆ|
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದಾಜ್ಞೆ||
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು|
ದಾವೀದನ ಮನೆತನದವರ ಸಿಂಹಾಸನಗಳು||
ಶುಭಸಂದೇಶ ವಾಚನ: ಲೂಕ 16:1-8
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: " ಒಬ್ಬ ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, ' ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು, ' ಎಂದ. ಆಗ ಆ ಮೇಸ್ತ್ರಿ, 'ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ, 'ಎಂದು ಚಿಂತಾಕ್ರಾಂತನಾದ. ಮರುಕ್ಷಣ, 'ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು, ' ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, 'ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು? 'ಎಂದು ಮೊದಲನೆಯವನನ್ನು ಕೇಳಿದ. ಅವನು, 'ನೂರು ಬುದ್ದಲಿ ಎಣ್ಣೆ, 'ಎಂದ. ಅದಕ್ಕೆ ಮೇಸ್ತ್ರಿ, 'ಇಗೋ, ನಿನ್ನ ಪತ್ರ, ಕುಳಿತುಕೊಂಡು " ಐವತ್ತು " ಎಂದು ಬೇಗನೆ ಬರೆ, 'ಎಂದ. ಬಳಿಕ ಇನ್ನೊಬ್ಬನನ್ನು ಕರೆದು, 'ನೀನೆಷ್ಟು ಸಾಲ ತೀರಿಸಬೇಕು? ' ಎಂದು ಕೇಳಿದ. ಅವನು ' ನೂರು ಖಂಡುಗ ಗೋದಿ ' ಎಂದಾಗ, 'ಇಗೋ, ನಿನ್ನ ಪತ್ರ, " ಎಂಭತ್ತು, " ಎಂದು ಬರೆ ' 'ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಶಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು."
No comments:
Post a Comment