ಮೊದಲನೇ ವಾಚನ: ಯೆಜೆಕಿಯೇಲಾ 47:1-2, 8-9, 12
ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
ಕೀರ್ತನೆ: 46:3,4, 5-6, 8, 11
ಶ್ಲೋಕ: ನದಿಯೊಂದು ಆನಂದಗೊಳಿಸುವುದು ದೇವನಗರವನು ಪುನೀತಗೊಳಿಸುವುದು ಪರಾತ್ಪರನಾ ನಿವಾಸವನು
ಎರಡನೇ ವಾಚನ: 1 ಕೊರಿಂಥಿಯಾಯರಿಗೆ 3:9-11, 16-17
ಸಹೋದರರೇ, ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿ ಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ. ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು. ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.
ಶುಭಸಂದೇಶ: ಯೋವಾನ್ನ 2:13-22
ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು. ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು. ‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.
No comments:
Post a Comment