ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.11.24 - "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ"

ಮೊದಲನೇ ವಾಚನ: ಪ್ರಕಟಣಾ ಗ್ರಂಥ 4:1-11



ಇದಾದ ಬಳಿಕ ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದ ಬಾಗಿಲು ತೆರೆದಿತ್ತು. ಮೊದಲು ನನ್ನೊಡನೆ ಮಾತನಾಡಿದ ತುತೂರಿಯಂಥ ನಾದವು ನನಗೆ ಕೇಳಿಸಿತು. ಅದು, “ಮೇಲೆ ಬಾ, ಮುಂದೆ ಸಂಭವಿಸಲಿರುವ ಘಟನೆಗಳನ್ನು ನಿನಗೆ ತೋರಿಸುವೆನು,” ಎಂದು ಹೇಳಿತು. ಕೂಡಲೇ, ನಾನು ದೇವರಾತ್ಮವಶನಾದೆ. ಆಗ ಸ್ವರ್ಗದಲ್ಲಿ ಒಂದು ಸಿಂಹಾಸನ ಇರುವುದನ್ನೂ ಅದರಲ್ಲಿ ಒಬ್ಬರು ಆಸೀನರಾಗಿರುವುದನ್ನೂ ಕಂಡೆ. ಅವರ ಮುಖ ಸೂರ್ಯಕಾಂತ ಮತ್ತು ಪದ್ಮರಾಗ ಹರಳುಗಳಂತೆ ಹೊಳೆಯುತ್ತಿತ್ತು. ಸಿಂಹಾಸನದ ಸುತ್ತಲೂ ಮರಕತದಂತೆ ಹೊಳೆಯುವ ಮುಗಿಲುಬಿಲ್ಲೊಂದು ಹೊಳೆಯುತ್ತಿತ್ತು. ಈ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಪೀಠಗಳು ಇದ್ದವು. ಶ್ವೇತವಸ್ತ್ರಧಾರಿಗಳಾದ ಇಪ್ಪತ್ನಾಲ್ಕುಮಂದಿ ಸಭಾಪ್ರಮುಖರು ಆ ಪೀಠಗಳಲ್ಲಿ ಕುಳಿತಿದ್ದರು. ಅವರು ತಮ್ಮ ತಲೆಗಳ ಮೇಲೆ ಚಿನ್ನದ ಕಿರೀಟಗಳನ್ನು ಧರಿಸಿದ್ದರು. ಸಿಂಹಾಸನದಿಂದ ಮಿಂಚು, ಗುಡುಗು, ಗರ್ಜನೆಗಳು ಹೊರಹೊಮ್ಮುತ್ತಿದ್ದವು. ಆ ಸಿಂಹಾಸನದ ಮುಂದೆ ದೇವರ ಸಪ್ತ ಆತ್ಮಗಳನ್ನು ಸೂಚಿಸುವ ಸಪ್ತದೀಪಗಳು ಬೆಳಗುತ್ತಿದ್ದವು. ಇದಲ್ಲದೆ, ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರವೊಂದು ಇದ್ದಂತೆ ಕಂಡುಬಂದಿತು. ಸಿಂಹಾಸನದ ಸುತ್ತಲೂ ಅದರ ನಾಲ್ಕು ಪಾರ್ಶ್ವಗಳಲ್ಲಿ ನಾಲ್ಕು ಜೀವಿಗಳು ಇದ್ದವು. ಅವುಗಳಿಗೆ ಮುಂದೆಯೂ ಹಿಂದೆಯೂ ಅನೇಕ ಕಣ್ಣುಗಳಿದ್ದವು. ಮೊದಲನೆಯ ಜೀವಿ ಸಿಂಹದಂತೆ ಇತ್ತು. ಎರಡನೆಯ ಜೀವಿ ಹೋರಿಯಂತಿತ್ತು. ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು ಮತ್ತು ನಾಲ್ಕನೆಯ ಜೀವಿಯು ಹಾರುತ್ತಿರುವ ಗರುಡ ಪಕ್ಷಿಯಂತಿತ್ತು. ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಅವುಗಳ ಸುತ್ತಲು ಮತ್ತು ಒಳಗು ಅನೇಕ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳೂ :

“ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು!
ಸರ್ವಶಕ್ತರಾದ ಪ್ರಭು ದೇವರು
ವರ್ತಮಾನಕಾಲದಲ್ಲಿ ಇರುವವರೂ
ಭೂತಕಾಲದಲ್ಲಿ ಇದ್ದವರೂ
ಭವಿಷ್ಯತ್‍ಕಾಲದಲ್ಲಿ ಬರುವವರೂ ಆಗಿದ್ದಾರೆ,”
ಎಂದು ಹಾಡುತ್ತಿದ್ದವು.
ಯುಗಯುಗಾಂತರಕ್ಕೂ ಜೀವಿಸುವ ಹಾಗೂ ಸಿಂಹಾಸನಾರೂಢರಾಗಿರುವ ವ್ಯಕ್ತಿಗೆ ಆ ಜೀವಿಗಳು ಘನತೆ, ಗೌರವ ಮತ್ತು ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿದ್ದವು. ಆ ಇಪ್ಪತ್ನಾಲ್ಕು ಸಭಾಪ್ರಮುಖರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸರ್ವಕಾಲಕ್ಕೂ ಜೀವಿಸುವ ಹಾಗೂ ಸಿಂಹಾಸನದಲ್ಲಿ ಆಸೀನರಾಗಿದ್ದ ವ್ಯಕ್ತಿಯ ಪಾದಗಳಿಗೆ ಅಡ್ಡಬಿದ್ದು ಯುಗಯುಗಾಂತರಗಳಲ್ಲಿಯೂ ಜೀವಿಸುವವರನ್ನು ಆರಾಧಿಸುತ್ತಾ: ನೀನೆಮ್ಮ ಪ್ರಭು ಹೇ ದೇವಾ, ಘನಮಾನ ಶಕ್ತಿಸನ್ಮಾನಗಳಿಗರ್ಹ, ಸಮಸ್ತವನು ನೀ ಸೃಷ್ಟಿಸಿದಾತ ಇರುವುದೆಲ್ಲವು ಜೀವಿಪುದೆಲ್ಲವು ನಿನ್ನ ಚಿತ್ತದಿಂದ,” ಎಂದು ಹಾಡುತ್ತಿದ್ದರು.

ಕೀರ್ತನೆ: 150:1-2, 3-4, 5-6

ಶ್ಲೋಕ: ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು! ಸರ್ವಶಕ್ತರಾದ ದೇವರು

ಶುಭಸಂದೇಶ: ಲೂಕ 19:11-28


ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: “ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತುಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, “ನಾನು ಬರುವತನಕ ವ್ಯಾಪಾರ ಮಾಡಿಕೊಂಡಿರಿ,” ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮಗೆ ರಾಜನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು.

“ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, ‘ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ. ಅದಕ್ಕೆ ಅವನು, ‘ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಾಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಕಾರಿಯಾಗಿರು,’ ಎಂದ. ಎರಡನೆಯ ಸೇವಕನು ಬಂದು, ‘ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ,’ ಎಂದ. ಅದಕ್ಕೆ ರಾಜ, ‘ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು,’ ಎಂದ.
 
“ಬಳಿಕ ಮತ್ತೊಬ್ಬ ಸೇವಕನು ಬಂದು, ‘ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡುಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ,’ ಎಂದ. ರಾಜ ಅವನನ್ನು ನೋಡಿ, ‘ಎಲಾ ದುಷ್ಟ ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದಿದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ,’ ಎಂದು ಹೇಳಿ ಪರಿಚಾರಕರಿಗೆ, ‘ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು ಹತ್ತು ನಾಣ್ಯಗಳುಳ್ಳವನಿಗೆ ಕೊಡಿ,’ ಎಂದ. ಅದಕ್ಕವರು, ‘ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?’ ಎಂದರು. ಆಗ ರಾಜ, ‘ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ,’ ಎಂದ. “ಅಲ್ಲದೆ, ‘ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ,” ಎಂದ.” ಇದನ್ನೆಲ್ಲಾ ಹೇಳಿ ಆದಮೇಲೆ ಯೇಸುಸ್ವಾಮಿ ಅವರೆಲ್ಲರಿಗಿಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

No comments:

Post a Comment