ಮೊದಲನೆಯ ವಾಚನ: ದಾನಿಯೇಲ 12:1-3
"ಆ ಕಾಲದಲ್ಲಿ ನಿನ್ನ ಜನರ ಪಕ್ಷವಹಿಸುವ ಮಹಾದೂತನಾದ ಮಿಖಾಯೇಲನು ಕಾಣಿಸಿಕೊಳ್ಳುವನು. ಮೊತ್ತಮೊದಲು, ಮಾನವ ಜನಾಂಗ ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸಿದ ಘೋರ ಸಂಕಟ ಉಂಟಾಗುವುದು. ಆಗ ನಿನ್ನ ಜನರಲ್ಲಿ ಯಾರ ಯಾರ ಹೆಸರುಗಳು ಜೀವಭಾದ್ಯರ ಪಟ್ಟಿಯಲ್ಲಿ ಇರುವುವೋ ಅವರೆಲ್ಲರು ಜೀವೋದ್ಧಾರವನ್ನು ಪಡೆಯುವರು. ಸತ್ತು ಧೂಳಿಮಣ್ಣಿನಲ್ಲಿ ' ದೀರ್ಘನಿದ್ದೆ ' ಮಾಡುತ್ತಿರುವ ಅನೇಕರು ಏಳುವರು, ಎಚ್ಚೆತ್ತವರಲ್ಲಿ ಕೆಲವರು ನಿತ್ಯಜೀವವನ್ನು ಅನುಭವಿಸುವರು, ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು. ಬುಧಿವಂತರು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಕ್ಕೂ ನಕ್ಷತ್ರಗಳಂತೆ ಹೊಳೆಯುವರು.
ಕೀರ್ತನೆ 16:5, 8, 9-11
ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು.
ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೆ|
ನಿನ್ನ ಕೈಯಲ್ಲಿದೆ ಪ್ರಭೂ, ನನ್ನ ವಿಮೆ||
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ|
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ?||
ಈ ಕಾರಣ ಹರ್ಷದಿಂದಿದೆ ಎನ್ನಯ ಹೃದಯ|
ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ||
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ|
ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ||
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು|
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು|
ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು||
ಎರಡನೆಯ ವಾಚನ: ಹಿಬ್ರಿಯರಿಗೆ 10:11-14,18
ಸಹೋದರರೇ, ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪನಿವಾರಣೆ ಆಗದು. ಕ್ರಿಸ್ತ ಯೇಸು ಪಾಪನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಅಸೀನರಾಗಿದ್ದಾರೆ. ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವತನಕ ಅಲ್ಲೇ ಕಾದಿರುತ್ತಾರೆ. ತಾವು ಪುನೀತಗೊಳಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ. ಪಾಪಗಳ ಕ್ಷಮಾಪಣೆಯಾದ ಬಳಿಕ ಪಾಪಪರಿಹಾರಕ ಬಲಿಯ ಅವಶ್ವಕತೆ ಇಲ್ಲ.
ಶುಭಸಂದೇಶ ವಾಚನ: ಮಾರ್ಕ 13:24-32
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಆ ದಿನಗಳಲ್ಲಿ ಈ ಸಂಕಷ್ಟಗಳು ಮುಗಿದ ಬಳಿಕ ಸೂರ್ಯನು ಅಂಧಕಾರಮಯನಾಗುವನು, ಚಂದ್ರನು ಕಾಂತಿಹೀನನಾಗುವನು, ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು, ಗ್ರಹಶಕ್ತಿಗಳು ಕಂಪಿಸುವುವು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಆತನು ದೇವದೂತರನ್ನು ಜಗತ್ತಿನ ನಾಲ್ಕು ದಿಕ್ಕುಗಳಿಗೂ ಕಳುಹಿಸಿ, ತಾನು ಆರಿಸಿಕೊಂಡವರನ್ನು ವಿಶ್ವದ ಅಷ್ಟದಿಕ್ಕುಗಳಿಂದಲೂ ಒಟ್ಟುಗೂಡಿಸುವನು. ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ನರಪುತ್ರನು ಸಮೀಪಿಸಿದ್ದಾನೆ, ಹೊಸ್ತಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ. ಇವೆಲ್ಲವೂ ಸಂಭವಿಸುವುದಕ್ಕೆ ಮುಂಚೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿ ಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುವುವು, ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು. ಆ ದಿನವಾಗಲಿ, ಆ ಗಳಿಗೆಯಾಗಲಿ, ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ, ಅದನ್ನು ಅರಿಯರು."
No comments:
Post a Comment