ಮೊದಲನೆಯ ವಾಚನ: ಯೆರೆಮೀಯ 33:14-16
ಸರ್ವೇಶ್ವರ ಹೀಗೆನ್ನುತ್ತಾರೆ: "ಗಮನಿಸಿರಿ ! ದಿನಗಳು ಬರಲಿವೆ, ಇಸ್ರಯೇಲ್, ಯೆಹೂದ ವಂಶಗಳ ವಿಷಯವಾಗಿ ನಾನು ನುಡಿದಿರುವ ಶುಭವಾಕ್ಯವನ್ನು ನೆರವೇರಿಸುವ ದಿನಗಳು ಬರಲಿವೆ. ಆ ಕಾಲದಲ್ಲಿ, ಆ ದಿನಗಳಲ್ಲಿ, ದಾವೀದನೆಂಬ ಮೂಲದಿಂದ ಸದ್ಧರ್ಮಿಯಾದ ಮೊಳಕೆಯೊಂದನ್ನು ಚಿಗುರಿಸುವೆನು. ಆತನು ನಾಡಿನಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು. ಆಗ ಯೆಹೂದ್ಯರು ಸುರಕ್ಷಿತವಾಗಿರುವರು. ಜೆರುಸಲೇಮಿನವರು ನೆಮ್ಮದಿಯಿಂದ ವಾಸಿಸುವರು. ' ಯೆಹೋವಚಿದ್ಕೇನು ' (ಅಂದರೆ ಸರ್ವೇಶ್ವರನೇ ನನ್ನ ಸದ್ಧರ್ಮ) ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.
ಕೀರ್ತನೆ 25:4-5, 8-9, 10
ಶ್ಲೋಕ : ಎತ್ತಿರುವೆ ಪ್ರಭೂ ಹೃನ್ಮನಗಳನ್ನು ನಿನ್ನತ್ತ |
ನಿನ್ನ ಮಾರ್ಗವನು, ಪ್ರಭೂ, ಎನಗೆ ತೋರಿಸು|
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು||
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ ಮುಕ್ತಿದಾತಾ|
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ||
ಸತ್ಯಸ್ವರೂಪನು ದಯಾವಂತನು ಪ್ರಭು|
ದಾರಿತಪ್ಪಿದವರಿಗೆ ಬೋಧಕನು ಪ್ರಭು||
ದೀನರನು ನಡೆಸುವನು ತನ್ನ ವಿಧಿಗನುಸಾರ|
ದಲಿತರಿಗೆ ಕಲಿಸುವೆನು ತನ್ನ ಧರ್ಮಾಚಾರ||
ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ|
ಆತನ ವಿಧಿನಿಯಮಗಳ ಪರಿಪಾಲಕರಿಗೆ ಅವುಗಳು ಸುಪ್ರೀತ||
ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ|
ಅಂಥವರಿಗೆ ವ್ಯಕ್ತ ಆತನ ಒಡಂಬಡಿಕೆ||
ಎರಡನೆಯ ವಾಚನ: 1 ಪೌಲ 3:12-4:2
ಸಹೋದರರೇ, ನಿಮ್ಮ ಮೇಲೆ ನಮಗಿರುವ ಪ್ರೀತಿ ವೃದ್ಧಿಯಾಗುತ್ತಿರುವಂತೆಯೇ, ನಿಮ್ಮ ಪರಸ್ಪರ ಪ್ರೀತಿಯೂ ಸರ್ವಜನಪ್ರೇಮವೂ ಬೆಳೆದು ಸಮೃದ್ದಿಯಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭು ಯೇಸು ನಿಮ್ಮನ್ನು ದೃಢಪಡಿಸಲಿ; ತಮ್ಮ ಪರಿಶುದ್ಧ ಪರಿವಾರದ ಸಮೇತ ಯೇಸು ಪುನರಾಗಮಿಸುವಾಗ, ನಮ್ಮ ಪಿತನಾದ ದೇವರ ಸನ್ನಿಧಾನದಲ್ಲಿ ನೀವೂ ಸಹ ಪರಿಶುದ್ಧರೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಂತೆ ಮಾಡಲಿ. ಕಡೆಯದಾಗಿ ಸಹೋದರರೇ, ನೀವು ಹೇಗೆ ಬಾಳಬೇಕು, ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ, ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ.
ಶುಭಸಂದೇಶ: ಲೂಕ 21:25-28, 34-36
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸುಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕು ತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು. ಆಗ ನರಪುತ್ರನು ಮಹಾ ಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಇವೆಲ್ಲವೂ ಸಂಭವಿಸಲು ತೊಡಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು. ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗುರೂಕರಾಗಿರಿ ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆಮಾಡುತ್ತಾ ಎಚ್ಚರಿಕೆಯಿಂದಿರಿ, " ಎಂದರು.
No comments:
Post a Comment